ಶನಿವಾರಸಂತೆ, ಅ. ೨೪: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವು ಸ್ಥಳೀಯರು ಕಾಮಗಾರಿ ಮಾಡದಂತೆ ಅಡಚಣೆ ಮಾಡುತ್ತಾರೆಂದು ಗುತ್ತಿಗೆದಾರರು ಪಂಚಾಯಿತಿಗೆ ದೂರು ನೀಡಿರುವುದರಿಂದ ಈ ಜಾಗವು ಕಾರ್ಯನಿರ್ವಹಣಾಧಿಕಾರಿಯವರ ಹೆಸರಿಗೆ ೨ ಎಕರೆ ಜಾಗ ಮಂಜೂರಾಗಿದ್ದು, ಈ ಜಾಗದಲ್ಲಿ ಕಸ ವಿಲೇವಾರಿಗೆ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾಡದಂತೆ ಯಾರಾದರೂ ಅಡಚಣೆ ಮಾಡಿದ್ದಲ್ಲಿ ಆರಕ್ಷಕ ಠಾಣೆಗೆ ದೂರು ನೀಡಿ ಕಾನೂನು ರೀತಿ ಕ್ರಮಕೈಗೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಫರ್ಜಾನ, ಸದಸ್ಯರಾದ ಎಸ್.ಎನ್. ರಘು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಾರ್ಯದರ್ಶಿ ದೇವರಾಜ, ಬಿಲ್ ಕಲೆಕ್ಟರ್ ವಸಂತ್ ಕುಮಾರ್ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಹಾಜರಿದ್ದರು.