*ಗೋಣಿಕೊಪ್ಪ, ಅ. ೨೪: ಪರಿಸರ ಸ್ನೇಹಿ ದೀಪಾವಳಿಯನ್ನು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ನಡೆಸಲಾಯಿತು. ಶಾಲೆಯ ಸಭಾಂಗಣದಲ್ಲಿ ಮಕ್ಕಳು ತಾವು ತಂದಿದ್ದ ಮಣ್ಣಿನ ದೀಪ, ಬತ್ತಿ ಮತ್ತು ಎಣ್ಣೆಯಿಂದ ದೀಪ ಹೊತ್ತಿಸಿ ಬೆಳಕಿನ ಹಬ್ಬದ ಬಗೆ ತಿಳಿದುಕೊಂಡರು.

ಮಕ್ಕಳಿಗೆ ಇಷ್ಟವಾದ ಪುಸ್ತಕ, ಬೈನಾಕ್ಯುಲರ್, ಡ್ರಾಯಿಂಗ್ ಪುಸ್ತಕ, ಬಣ್ಣಗಳು ಅಥವಾ ಪುಟ್ಟ ಕ್ಯಾಮರಾಗಳನ್ನು ಕೊಡಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಬಹುದು ಎಂದು ಸಂಘದ ಸಂಚಾಲಕ, ವಿಜ್ಞಾನ ಶಿಕ್ಷಕ ಡಿ. ಕೃಷ್ಣಚೈತನ್ಯ ಪ್ರಾಸ್ತಾವಿಕ ನುಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ಜಲಜ ಅವರು ಮಾತನಾಡಿ, ಮಕ್ಕಳು ಮನಸ್ಸು ಮಾಡಿ ಪಟಾಕಿ ಒಡೆಯುವ ಪ್ರವೃತ್ತಿಯನ್ನು ಬಿಡಬೇಕು, ಕಣ್ಣುಗಳು ಅಮೂಲ್ಯವಾದ ಅಂಗವಾಗಿದ್ದು, ಅವುಗಳನ್ನು ಕುರುಡು ಮಾಡಿಕೊಳ್ಳದೇ ಜಗತ್ತನ್ನು ನೋಡಲು, ಓದಲು-ಬರೆಯಲು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಕ್ಷಕರುಗಳಾದ ಗಿಡ್ಡಯ್ಯ, ಈಶ, ಸಬೀನ ಬಾನು, ಗಿರೀಶ್, ಯಶೋಧ ವಿದ್ಯಾರ್ಥಿ ಸಂಘದ ಮತ್ತು ಪರಿಸರ ಸಂಘದ ಸದಸ್ಯರು ಇದ್ದರು.