ನಾಪೋಕ್ಲು, ಅ. ೨೩: ನೆಲಜಿ ಫಾರ್ಮರ್ಸ್ ಕ್ಲಬ್ ವತಿಯಿಂದ ಕೊಡವ ಕೌಟುಂಬಿಕ ಕೋವಿ ಉತ್ಸವವನ್ನು ಜನವರಿ ೧೪ ಮತ್ತು ೧೫ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಮಂಡಿರ ನಂದ ನಂಜಪ್ಪ ಹೇಳಿದರು.
ನಾಪೋಕ್ಲುವಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೩ರ ಜನವರಿ ೧೪ ಮತ್ತು ೧೫ರಂದು ಕೊಡವ ಕೌಟುಂಬಿಕ ಕೋವಿ ಉತ್ಸವವನ್ನು ಸುಮಾರು ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಆಯೋಜಿಸಲಾಗಿದ್ದು ಸ್ಪರ್ಧೆಯು ಪ್ರತಿ ಕೊಡವ ಕುಟುಂಬಗಳ ನಡುವೆ ನಡೆಯಲಿದೆ. ಸ್ಪರ್ಧೆಗೆ ಕೊಡವ ಉಡುಪು ಧರಿಸಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ.
೦.೨೨ ಮತ್ತು ೧೨ ಬೋರ್ ಎರಡು ವಿಭಾಗಗಳಲ್ಲಿ ಪ್ರತ್ಯೇಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರತಿ ವಿಭಾಗದ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದರು. ಜಿಲ್ಲೆಯಲ್ಲಿ ೮೫೩ ಕೊಡವ ಕುಟುಂಬಗಳು ಇದ್ದು ಎಲ್ಲಾ ಕುಟುಂಬಸ್ಥರು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಶೇಷ ಸಂಸ್ಕೃತಿ ಸಾಂಪ್ರದಾಯವನ್ನು ಉಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಪತ್ರಿಕಾ ಗೋಷ್ಠಿಯಲ್ಲಿ ಖಜಾಂಜಿ ಚೀಯಕಪೂವಂಡ ನವೀನ್ ನಾಚಪ್ಪ, ನಿರ್ದೇಶಕರಾದ ಮಾಳೆಯಂಡ ವಿಜು ಅಪ್ಪಚ್ಚ, ಮಾಳೆಯಂಡ ವಿಜು ವಿಜಯ್, ಅಪ್ಪುಮಣಿಯಂಡ ಕಿಸುಮೇದಪ್ಪ, ಸದಸ್ಯ ಮಾಳೆಯಂಡ ಅಪ್ಪಣ್ಣ ಪಾಲ್ಗೊಂಡಿದ್ದರು.
- ದುಗ್ಗಳ ಸದಾನಂದ