ಮಡಿಕೇರಿ, ಅ. ೨೩: ರಾಜ್ಯದ ಬಿಜೆಪಿ ಸರ್ಕಾರ ಕೇವಲ ಹಲವು ಘೋಷಣೆಗಳಿಗಷ್ಟೆ ಸೀಮಿತವಾಗಿದ್ದು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಕ್ರಮ ಗಳು ರಾಜ್ಯದ ಜನತೆಗೆ ತಲುಪುತ್ತಿಲ್ಲ ವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

ಮಡಿಕೇರಿ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಮಾಜಿ ಜಿಲ್ಲಾದ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯ, ದಂಪತಿ ಪುತ್ರ ವಿವೇಕ್ ಪೂವಯ್ಯ ಮತ್ತು ವೀರಾಜಪೇಟೆಯ ನಡಿಕೇರಿಯಂಡ ರಾಬಿನ್ ಮುದ್ದಪ್ಪ ದಂಪತಿ ಪುತ್ರಿ ನಿಮಿಷ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಕೊಡಗಿನಲ್ಲಿ ಹಲವಾರು ಪ್ರಮುಖ ಸಮಸ್ಯೆ ಗಳಿದ್ದರೂ ಇವುಗಳನ್ನು ಬಗೆಹರಿಸು ವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಜಾಹೀರಾತು ನೀಡಿ ಸಾಧನೆ ಮಾಡಿದ್ದೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.

ಕೊಡಗಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮಳೆಯಲ್ಲಿ ತೊಂದರೆ ಅನುಭವಿಸಿದ ಜನರಿಗೆ ಇನ್ನೂ ಕೂಡ ನ್ಯಾಯ ಒದಗಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ರೈತರು ಬೆಳೆದ ಬೆಳೆಗಳು ಮಳೆಯಿಂದ ನಷ್ಟಗೊಂಡಿದ್ದರೂ ಸರ್ಕಾರದ ಎನ್.ಡಿ.ಆರ್.ಎಪ್. ನಿಯಮದಂತೆ ಪರಿಹಾರ ನೀಡಲಾಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮೃತ ಕುಟುಂಬದ ಸದಸ್ಯರಿಗೆ ೧ ಲಕ್ಷ ಪರಿಹಾರ ನೀಡುವುದಾಗಿ ಮಾಡಿದ ಘೋಷಣೆಯಲ್ಲಿ ಶೇ.೭೦ ಭಾಗದ ಜನರಿಗೆ ನೆರವು ತಲುಪಿಲ್ಲ, ಕೇವಲ ಜಾಹೀರಾತು ಹಾಗೂ ಸರ್ಕಾರದ ಆದೇಶದಲ್ಲಿ ಮಾತ್ರ ಯೋಜನೆ ಕಾಣುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಅಭಿವೃದ್ಧಿಗಿಂತ ಕೇವಲ ಧರ್ಮಗಳ ನಡುವೆ ಸಮಾಜದಲ್ಲಿ ಒಡಕನ್ನು ತರುವ ನಿಟ್ಟಿನಲ್ಲಿ ರಾಷ್ಟಿçÃಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಜನರ ಜೀವದ ಮೇಲೆ ಚೆಲ್ಲಾಟವಾಡುವಲ್ಲಿ ನಿರತವಾಗಿವೆ.

ಕೊಡಗಿನ ವಾಣಿಜ್ಯ ಬೆಳೆಗೆ ಉತ್ತಮ ಬೆಂಬಲ ಬೆಲೆ ದೊರೆಯುತ್ತಿಲ್ಲ, ಪ್ರವಾಸೋದ್ಯಮದ ಮೂಲಕ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದ ಇವರು ಮುಂದೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕೊಡಗಿನಲ್ಲಿ ಪಕ್ಷದ ಅಪಾರ ಬೆಂಬಲಿಗರು ಇದ್ದಾರೆ ಇವರೊಂದಿಗೆ ಚುನಾವಣೆಗೆ ತೆರಳುವುದಾಗಿ ತಿಳಿಸಿದರು.

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎಂ.ಎಲ್.ಸಿ.ಗಳಾದ ಅಡಗೂರು ವಿಶ್ವನಾಥ್, ಮಂಡೆಪAಡ ಸುಜಾ ಕುಶಾಲಪ್ಪ, ಮಾಜಿ ಎಂ.ಎಲ್.ಸಿ. ಮೇರಿಯಂಡ ಸಿ. ನಾಣಯ್ಯ, ಚೆಪ್ಪುಡೀರ ಅರುಣ್ ಮಾಚಯ್ಯ, ಮಾಜಿ ಮಂತ್ರಿ ಬಿ.ಎ. ಜೀವಿಜಯ, ಕೆಪಿಸಿಸಿ ವಕ್ತಾರ ಅಜ್ಜಿಕುಟ್ಟೀರ ಪೊನ್ನಣ್ಣ, ಬಗರ್ ಹುಕುಂ ಅಧ್ಯಕ್ಷ ಗಿರೀಶ್ ಗಣಪತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಅರಮೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವಿವಿಧ ಪಕ್ಷದ ಪ್ರಮುಖರಾದ ಎಸ್.ಎಚ್. ಮತೀನ್, ಸಿಎನ್‌ಸಿ ಪ್ರಮುಖ ಎನ್.ಯು. ನಾಚಪ್ಪ, ಮನ್ಸೂರ್ ಅಲಿ, ಕುಟುಂಬ ಬಳಗದ ಸಜನ್ ಪೂವಯ್ಯ, ಮೇರಿಯಂಡ ಪೂವಯ್ಯ, ನರೇಂದ್ರ ಕಾಮತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್