ಮಡಿಕೇರಿ, ಅ. ೨೩: ಭಾಗಮಂಡಲದ ಕೃಷಿ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಡಿ ನೌಕರನ ವಿರುದ್ಧ ಮುಖ್ಯಮಂತ್ರಿಗೆ ಅನಾಮದೇಯ ಪತ್ರ ರವಾನೆಯಾಗಿದೆ.

ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ ರೈತರಿಗೆ ಬರುವ ರಿಯಾಯಿತಿ ದರದ ಪೈಪ್‌ಗಳನ್ನು ರೈತರಿಗೆ ನೀಡದೆ ಇತರರಿಗೆ ಮಾರಾಟ ಮಾಡು ತ್ತಿರುವುದಾಗಿ ದೂರಿನಲ್ಲಿ ಆರೋಪಿಸ ಲಾಗಿದೆ. ಪೈಪ್‌ಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಈ ವ್ಯಕ್ತಿ ಒತ್ತಾಯಿಸುತ್ತಿದ್ದು, ೧೦,೦೦೦ ನೀಡಿದವರಿಗೆ ಒಂದು ಸೆಟ್ ಪೈಪ್‌ಗಳನ್ನು ನೀಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆ ಕೊಚ್ಚುವ ಯಂತ್ರ, ಟಾರ್ಪಲ್, ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳನ್ನು ದುರುಪಯೋಗಪಡಿಸಿ ಕೊಂಡಿರುವುದಾಗಿ ದೂರಲಾಗಿದೆ.

ಈ ಆರೋಪಗಳ ಬಗ್ಗೆ ಕೊಡಗು ಜಿಲ್ಲಾ ಕೃಷಿ ಇಲಾಖೆ, ಜಂಟಿ ನಿರ್ದೇಶಕರಿಗೆ ರಾಜ್ಯ ಉಪಕೃಷಿ ನಿರ್ದೇಶಕರು ಪತ್ರವನ್ನು ಬರೆದು ಸ್ಪಷ್ಟನೆಯನ್ನು ನೀಡಲು ನಿರ್ದೇಸಿದ್ದಾರೆ. ರೈತರಿಗೆ ಲಭಿಸಬೇಕಾದ ಪಿಎಂ ಕಿಸಾನ್ ನಿಧಿ ಹಣವನ್ನು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ದಾಖಲೆ ಪಡೆಯದೆ ಕಬಳಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಲಾಖೆಯಲ್ಲಿ ನೌಕರನ ಬಗ್ಗೆ ಈ ಹಿಂದೆ ದೂರು ನೀಡಲಾಗಿ ತನಿಖೆ ಮೊಟಕುಗೊಂಡಿತ್ತು.