ದ್ವೇಷದ ಭಾಷಣದ ಬಗ್ಗೆ ‘ಸುಪ್ರೀಂ' ಕಿಡಿ : ಕ್ರಮಕ್ಕೆ ಸೂಚನೆ

ನವದೆಹಲಿ, ಅ. 21: ದ್ವೇಷಪೂರಿತ ಭಾಷಣ ಅಥವಾ ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಸಹನೆ ಹೊರಹಾಕಿದೆ. ದ್ವೇಷದ ಭಾಷಣ ಮಾಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರ್ಟ್ ಆದೇಶಿಸಿದೆ. ದೇಶದಲ್ಲಿ ದ್ವೇಷದ ವಾತಾವರಣ ಪ್ರಾಬಲ್ಯ ಹೊಂದಿದೆ. ದ್ವೇಷದ ಭಾಷಣಗಳು ಆತಂಕಕಾರಿಯಾಗಿದ್ದು ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಔಪಚಾರಿಕವಾಗಿ ದೂರು ದಾಖಲಾಗುವವರೆಗೂ ಕಾಯದೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟೀಸ್ ನೀಡಿದೆ. ದ್ವೇಷ ಭಾಷಣಗಳ ಕುರಿತಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ನೀಡುವಂತೆ ಮೂರು ರಾಜ್ಯಗಳಿಗೆ ನೋಟೀಸ್ ನೀಡಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ಬೆದರಿಕೆಗಳನ್ನು ತಡೆಯಲು ತಕ್ಷಣದ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ಪೀಠ, 21ನೇ ಶತಮಾನದಲ್ಲಿ ಏನಾಗುತ್ತಿದೆ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ನಾವು ದೇವರನ್ನು ಎಷ್ಟು ಚಿಕ್ಕದಾಗಿ ಮಾಡಿದ್ದೇವೆ? ಭಾರತದ ಸಂವಿಧಾನವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದರು. ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್, ಇಂತಹ ವಿಷಯಗಳಿಗೆ ನಾವು ನ್ಯಾಯಾಲಯಕ್ಕೆ ಬರಬಾರದು. ಆದರೆ ನಾವು ಅನೇಕ ದೂರುಗಳನ್ನು ಕೊಟ್ಟಿದ್ದೇವೆ. ಆದರೆ ಯಾವುದೇ ಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಬರದೆ ಬೇರೆ ದಾರಿ ಇಲ್ಲ ಎಂದು ವಾದಿಸಿದರು. ಕಪಿಲ್ ಸಿಬಲ್ ಅವರು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ಭಾಷಣವನ್ನು ಉಲ್ಲೇಖಿಸಿ, ಬಿಜೆಪಿ ಮುಖಂಡರೊಬ್ಬರು ಈ ರೀತಿ ದ್ವೇಷದ ಭಾಷಣ ಮಾಡಿದ್ದಾರೆ. ಅವರು ಮುಸ್ಲಿಂ ಅಂಗಡಿಯಿಂದ ಏನನ್ನು ಖರೀದಿ ಮಾಡುವುದಿಲ್ಲ, ಅವರಿಗೆ ಕೆಲಸ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಡಳಿತವು ಏನೂ ಮಾಡಿಲ್ಲ ಎಂದು ವಾದಿಸಿದರು. ದೇಶಾದ್ಯಂತ ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳ ಬಗ್ಗೆ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ ಅಂತಹವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಅರ್ಜಿದಾರ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಪಂಜಾಬ್ ಸರ್ಕಾರಿ ನೌಕರರಿಗೆ ಮಾನ್ ದೀಪಾವಳಿ ಬಂಪರ್ ಗಿಫ್ಟ್: ಹಳೆ ಪಿಂಚಣಿ ಯೋಜನೆ ಜಾರಿ

ಚಂಡೀಗಢ, ಅ. 21: ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ಪಂಜಾಬ್ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದು, ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡಲು ನಿರ್ಧರಿಸಿದೆ. ಇದನ್ನು ದೀಪಾವಳಿ ಉಡುಗೊರೆ ಎಂದು ಬಣ್ಣಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು, ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಉದ್ಯೋಗಿಗಳಿಗೆ ಶೇ. 6 ರಷ್ಟು ತುಟ್ಟಿಭತ್ಯೆ ಸಹ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಗೆ ಸೇರಲು ನೌಕರರಿಗೆ ಆಯ್ಕೆಯನ್ನು ನೀಡಲಾಗುವುದು ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಇಲ್ಲಿಯೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿ ಮಾಡುವುದಾಗಿ ಆಪ್ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

‘ಪಥೇರ್ ಪಾಂಚಾಲಿ', ಕನ್ನಡದ ‘ಘಟಶ್ರಾದ್ಧ' ಅತ್ಯುತ್ತಮ ಚಿತ್ರಗಳು

ಮುಂಬೈ, ಅ. 21: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ಧ, ಭಾರತದ ಲಿಜೆಂಡರಿ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ' ಮತ್ತಿತರ ಚಿತ್ರಗಳು ‘ಭಾರತದ ಸಾರ್ವಕಾಲಿಕ ಅತ್ಯುತ್ತಮ ಚಿತ್ರ ಎಂದು ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ (ಎಫ್‍ಐಪಿಆರ್ ಇಎಸ್‍ಸಿಐ) ಘೋಷಿಸಿದೆ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ 1973ರಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಚಿತ್ರ ವಿಮರ್ಶಕರ ಒಕ್ಕೂಟ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟಾಪ್ 10 ಚಿತ್ರಗಳ ಪೈಕಿ 1955ರಲ್ಲಿ ಬಿಡುಗಡೆಯಾದ ಪಥೇರ್ ಪಾಂಚಾಲಿ' ಪ್ರಥಮ ಸ್ಥಾನ ಪಡೆದಿದೆ. ರಹಸ್ಯವಾಗಿ 30 ಸದಸ್ಯರಿಂದ ಈ ಸಮೀಕ್ಷೆ ನಡೆಸಿದ್ದಾಗಿ ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

ಮುರುಘಾ ಶ್ರೀ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಚಿತ್ರದುರ್ಗ, ಅ. 21: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನ ವಿಸ್ತರಿಸಿ ಚಿತ್ರದುರ್ಗ ಕೋರ್ಟ್ ಶುಕ್ರವಾರ ಆದೇಶಿಸಿದೆ. ಮುರುಘಾ ಶ್ರೀಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಆರೋಪಿಯನ್ನು ಎರಡನೇ ಅಪರ ಮತ್ತು ಸತ್ರ ನ್ಯಾಯಾಧೀಶೆ ಬಿ.ಕೆ. ಕೋಮಲಾ ಅವರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ. ಕೋಮಲಾ ಅವರು ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 3ರ ವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಸಹ ಕೋರ್ಟ್ ನವೆಂಬರ್ 3ರ ವರೆಗೆ ವಿಸ್ತರಿಸಿ ಆದೇಶಿಸಿದೆ.

ರೈಲ್ವೆ ಹೊರಗುತ್ತಿಗೆ ನೌಕರರಿಂದ ರೂ. 80 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರು, ಅ. 21: ಡ್ರಗ್ಸ್ ದಂಧೆ ಮಾಡುತ್ತಿದ್ದ ಆರೋಪದ ಮೇಲೆ ರೈಲ್ವೆಯ ಮೂವರು ಹೊರಗುತ್ತಿಗೆ ನೌಕರರನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೆÇಲೀಸರು ಬಂಧನಕ್ಕೊಳಪಡಿಸಿದ್ದು, ರೂ. 80 ಲಕ್ಷ ಮೌಲ್ಯದ ಡ್ರಗ್ಸ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಬಪ್ಪಾ ಕರ್ಡೆ, ಪಿಂಟು ದಾಸ್ ಮತ್ತು ರಾಜೇಶ್ ಪಾಲ್ ಎಂದು ಗುರ್ತಿಸಲಾಗಿದೆ. ಮೂವರು ಈಶಾನ್ಯ ಗಡಿ ರೈಲ್ವೆ ಕೋಚಿಂಗ್ ಡಿಪೆÇನಲ್ಲಿ ಎಸಿ ಅಟೆಂಡರ್ ಹಾಗೂ (ಬೆಡ್ ರೋಲ್) ಮಲಗುವ ಕೋಣೆಯ ಅಂಟೆಂಡರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು ತಮಗೆ ನೀಡಲಾಗಿದ್ದ ಬೋಗಿಗಳಲ್ಲಿ ಅಸ್ಸಾಂನಿಂದ ಡ್ರಗ್ಸ್ ಸಾಗಿಸುತ್ತಿದ್ದು, ಡ್ರಗ್ಸ್‍ಗಳನ್ನು ಕೋಚ್‍ಗಳ ಲಾಕರ್‍ಗಳಲ್ಲಿ ಇಟ್ಟು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಗಳಿಗೆ ನೀಡುತ್ತಿದ್ದರೆನ್ನಲಾಗಿದೆ. ಮೂವರಿಂದ ಸುಮಾರು 1.1 ಕೆ.ಜಿ. ಹಶೀಶ್ ಎಣ್ಣೆ ಮತ್ತು 6 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬೈಯಪ್ಪನಹಳ್ಳಿ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇದೊಂದು ದೊಡ್ಡ ದಂಧೆಯಾಗಿದೆ. ಕಮಿಷನ್ ಆಧಾರದ ಮೇಲೆ ಡ್ರಗ್ಸ್ ಪೆಡ್ಲರ್‍ಗಳ ಆದೇಶದಂತೆ ಅಸ್ಸಾಂನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುವ ಕೆಲಸ ಇವರು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ. ಮೂವರ ಬಳಿಯಿದ್ದ ನಾಲ್ಕು ಮೊಬೈಲ್ ಫೆÇೀನ್‍ಗಳನ್ನು ವಶಕ್ಕೆ ಪಡೆಯಲಾಗಿದೆ.