ವೀರಾಜಪೇಟೆ, ಅ. ೨೦: ಕೊಡಗು ಜಿಲ್ಲಾ ಜನರಲ್ ವಕರ್ಸ್ ಯೂನಿ ಯನ್ ವತಿಯಿಂದ ತೋಟ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ್ ಅವರ ನೇತೃತ್ವದಲ್ಲಿ ತಾಲೂಕು ಕಚೇರಿ ಹಾಗೂ ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಅರಣ್ಯಾಧಿ ಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ತಹಶೀಲ್ದಾರ್ ಪರಿಶೀಲನೆ ನಡೆಸಿ ನಿವೇಶನ ರಹಿತರಿಗೆ ಭೂಮಿ ನೀಡಲು ಸರ್ಕಾರದ ಕಾನೂ ನಿನಂತೆ ನೋಂದಣಿ ಮಾಡಿ ಕೊಂಡವರಿಗೆ ಹಿರಿತನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಹಾಗೂ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು ಒಂದು ಹಂತಕ್ಕೆ ತರಲಾಗಿದೆ ಎಂದು ಹೇಳಿದರು.
ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ್ ಮಾತನಾಡಿ, ಮಾಲ್ದಾರೆ ಹಾಗೂ ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಪೈಸಾರಿ ಜಾಗ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ನಿವೇಶನ ನೀಡಲು ತಯಾರಿದ್ದಾರೆ. ಕೆಲವರು ಅದನ್ನು ಗೋಮಾಳ ಎಂದು ಬಡವರಿಗೆ ನಿವೇಶನ ನೀಡಲು ಅಡ್ಡಗಾಲು ಹಾಕುತ್ತಿದ್ದಾರೆ. ೧೫ ದಿನಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡದಿದ್ದರೆ ಅದೇ ಸ್ಥಳದಲ್ಲಿ ವಾಸ್ತವ್ಯ ಹೂಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ದಲ್ಲಾಳಿಗಳ ಹಾವಳಿ ಹಚ್ಚಾಗಿದೆ. ನೇರವಾಗಿ ಹೋದರೆ ಯಾವ ಕೆಲಸ ಕಾರ್ಯಗಳು ನಡೆಯುವುದಿಲ್ಲ. ದಲ್ಲಾಳಿಗಳ ಮೂಲಕವೇ ತೆರಳಬೇಕಿದೆ. ಸರ್ವೆ ಇಲಾಖೆಯಲ್ಲಿ ಕಡತ ವಿಲೇವಾರಿ ಮಾಡಲು ನೇರವಾಗಿ ಹಣ ಕೇಳುತ್ತಾರೆ ಎಂದು ಆರೋಪಿಸಿದರು.
ಕಾಡಾನೆ ಹಾವಳಿಯಿಂದ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ೫೦ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅನೇಕರು ಅಂಗವೈಕಲ್ಯರಾಗಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟರೆ ಸರ್ಕಾರ ರೂ. ೭ ಲಕ್ಷ ನೀಡಿ ಕೈ ತೊಳೆದು ಕೊಳ್ಳುತ್ತಾರೆ. ಅಪಾರ ಪ್ರಮಾಣದಲ್ಲಿ ವಾಣಿಜ್ಯ ಬೆಳೆಗಳು ನಾಶವಾಗಿದೆ. ಕಾಡಾನೆಯಿಂದ ಮೃತಪಟ್ಟರೆ ರೂ. ೨೫ ಲಕ್ಷ ನೀಡಬೇಕು. ಅಂಗವಿಕಲತೆ ಉಂಟಾದರೆ ರೂ. ೧೫ ಲಕ್ಷ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಬಿ. ರಮೇಶ್, ಉಪ ಕಾರ್ಯದರ್ಶಿ ರಾಜಪ್ಪ, ಹೋರಾಟ ಸಮಿತಿ ಅಧ್ಯಕ್ಷ ರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಸಾಬು, ಕಾರ್ಮಿಕ ಮುಖಂಡರಾದ ಡಾ. ದುರ್ಗಾಪ್ರಸಾದ್, ಭರತ್ ಮತ್ತಿತರರು ಭಾಗವಹಿಸಿದ್ದರು.