ಬೆಂಗಳೂರು, ಅ. ೨೦: ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಉದ್ದಿಮೆದಾರರು ಸರಳವಾಗಿ ಹಾಗೂ ಪಾರದರ್ಶಕವಾಗಿ ಉದ್ದಿಮೆ ಪರವಾನಗಿ ಪಡೆಯಲು ಅನುಕೂಲವಾಗುವಂತೆ ಪ್ರಸ್ತುತ ೧ ವರ್ಷಕ್ಕೆ ಮಾತ್ರ ಉದ್ದಿಮೆ - ವಾಣಿಜ್ಯ ಪರವಾನಗಿ ನೀಡುವ ಬಗ್ಗೆ ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶ ಸಮಿತಿಗಳಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ತಿದ್ದುಪಡಿ ಮಾಡಿ ಇದೀಗ ಪರವಾನಗಿಯ ಸಿಂಧುತ್ವವನ್ನು ಗರಿಷ್ಠ ೫ ವರ್ಷಗಳಿಗೆ ಸೀಮಿತಗೊಳಿಸಲು ರಾಜ್ಯ ಸರಕಾರ ಆದೇಶಿಸಿದ್ದು, ೫ ವರ್ಷಗಳ ನಂತರ ಹೊಸದಾಗಿ ಅಗತ್ಯ ದಾಖಲೆಗಳನ್ನು ಪುನಃ ಪಡೆದು ಪರಿಶೀಲಿಸಿ ಪರವಾನಗಿ ಮಂಜೂರು ಮಾಡುವಂತೆ ಕ್ರಮವಹಿಸಲಾಗುವುದು.

೫ ವರ್ಷಗಳ ಪರವಾನಗಿಯನ್ನು ಒಂದೇ ಬಾರಿಗೆ ಪಡೆಯಲು ಇಚ್ಚಿಸುವ ಉದ್ದಿಮೆದಾರರಿಂದ ೫ ವರ್ಷಗಳ ಶುಲ್ಕವನ್ನು ಒಂದೇ ಬಾರಿಗೆ ಪಾವತಿಸಿಕೊಂಡು ಪರವಾನಗಿಯನ್ನು ಮಂಜೂರು ಮಾಡಲು ಕ್ರಮವಹಿಸುವಂತೆಯೂ ಆದೇಶ ಹೊರಡಿಸಲಾಗಿದೆ.

ಉದ್ದಿಮೆದಾರರು - ಅರ್ಜಿದಾರರು ಪರವಾನಗಿಯನ್ನು ೧ ವರ್ಷ, ೨ ವರ್ಷ, ೩ ವರ್ಷ ಅಥವಾ ೪ ವರ್ಷಗಳ ಅವಧಿಗೆ ಪಡೆಯಲಿಚ್ಚಿಸಿದರೆ ನಿಗದಿತ ನವೀಕರಣ ಶುಲ್ಕವನ್ನು ಪಾವತಿಸಿದ ನಂತರ ಪರವಾನಗಿಯನ್ನು ಸ್ವಯಂ ಚಾಲಿತವಾಗಿ ನವೀಕರಣ ಗೊಳಿಸಲಾಗುವುದು.

ಆದರೆ, ಈ ರೀತಿ ಪ್ರತಿ ವರ್ಷ ನವೀಕರಣ ಶುಲ್ಕವನ್ನು ಪಾವತಿಸಿಕೊಂಡು ಮಂಜೂರು ಮಾಡಲಾದ ಪರವಾನಗಿಗಳು ಅಂತಿಮಗೊಳ್ಳುವ ದಿನಾಂಕಕ್ಕೆ ೩೦ ದಿನಗಳ ಮುಂಚಿತವಾಗಿ ಉದ್ದಿಮೆದಾರರು - ಅರ್ಜಿದಾರರು ನವೀಕರಣ ಮಾಡಿಸಿಕೊಳ್ಳದಿದ್ದಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ರ ಕಲಂ ೨೪೩ ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಷರತ್ತುಗಳು: ಉದ್ದಿಮೆದಾರರು ಘನತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ ರಲ್ಲಿನ ನಿಯಮಗಳನ್ನು ಪಾಲಿಸಬೇಕು. ಉದ್ದಿಮೆದಾರರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ೧೫ ದಿನಗಳ ನೋಟೀಸ್ ಜಾರಿ ಮಾಡಿ ಪರವಾನಿಗೆ ರದ್ದು ಮಾಡಲಾಗುವುದು. ಸರಕಾರದ ಯಾವುದೇ ಇಲಾಖೆ - ಪ್ರಾಧಿಕಾರದ ವರದಿಯ ಪ್ರಕಾರ ಪರವಾನಿಗೆ ರದ್ದುಪಡಿಸಬೇಕಾದ ಅನಿವಾರ್ಯತೆ - ಸಂದರ್ಭ ಉಂಟಾದಲ್ಲಿ ಪರವಾನಿಗೆ ರದ್ದುಪಡಿಸುವ ಬಗ್ಗೆ ಚಾಲ್ತಿಯಲ್ಲಿರುವ ನಿಯಮಗಳನ್ವಯ ರದ್ದುಪಡಿಸಲಾಗುವುದು. ಪರವಾನಿಗೆ ಉದ್ದೇಶ ಹಾಗೂ ಷರತ್ತುಗಳ ಉಲ್ಲಂಘನೆಯಾದಲ್ಲಿ ಪರವಾನಿಗೆಯನ್ನು ನಿಯಮಾನುಸಾರ ರದ್ದುಪಡಿಸುವುದಾಗಿ ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸತೀಶ್ ಕಬಾಡಿ ಆದೇಶಿಸಿದ್ದಾರೆ.