ವೀರಾಜಪೇಟೆ, ಅ. ೨೦: ಕೊಡಗಿನಲ್ಲಿ ಕಾಫಿ ಬೆಳೆಗಾರರು ಬೆಲೆಯ ಆಸ್ಥಿರತೆ, ವನ್ಯ ಮೃಗಗಳ ಹಾವಳಿ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಎದರಿಸುತ್ತಿದ್ದು, ಸರಕಾರ ಸಣ್ಣ ಬೆಳೆಗಾರರ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿ ಬೆಳೆ ವಿಮಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಂತಾಗಬೇಕು ಎಂದು ಸಿ.ಎ. ನಂದಾ ಸುಬ್ಬಯ್ಯ ಹೇಳಿದರು.
ವೀರಾಜಪೇಟೆ ನಗರದಲ್ಲಿರುವ ಕೊಡಗು ಉಪಾಧ್ಯಾಯರ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಫಾರ್ಮರ್ಸ್ ಫೆಡರೇಶನ್ ಕೊಡಗು ಘಟಕದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾಗೂ ಲಂಚದ ಹಾವಳಿಯನ್ನು ಮಟ್ಟಹಾಕಬೇಕು, ರೈತರ ಭೂಮಿಯಲ್ಲಿ ಬೆಳೆದ ಮರದ ಹಕ್ಕನ್ನು ರೈತರಿಗೆ ನೀಡಬೇಕು. ರೈತರಿಗೆ ೧೦ ಹೆಚ್.ಪಿ. ಮೋಟರ್ಗೆ ಉಚಿತ ವಿದ್ಯುತ್ ಸಂಪರ್ಕ ನೀಡುವಂತಾಗಬೇಕು. ಪರಿಶಿಷ್ಟ ಪಂಗಡದ ಹಾಡಿಗಳಲ್ಲಿರುವ ಕೃಷಿ ಭೂಮಿಗೆ ದಾಖಲಾತಿಗಳನ್ನು ಅಧಿಕಾರಿಗಳು ಒದಗಿಸಿಕೊಡುವಂತಾಗಬೇಕು. ರಾಜ್ಯ ಸರಕಾರ ಕಾಡಾನೆ ಮತ್ತು ಹುಲಿಗಳನ್ನು ಹಿಡಿಯಲು ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಕಾಫಿ ಭೋರ್ಡ್ ಪ್ರಜಾಸತ್ತಾತ್ಮಕವಾಗಿ ಸಣ್ಣ ಬೆಳೆಗಾರರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶಿಸುತ್ತಿರುವ ಕರಿಮೆಣಸನ್ನು ತಡೆಯಬೇಕೆಂದು ನಂದಾ ಸುಬ್ಬಯ್ಯ ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಖಿಲ ಭಾರತ ಕಿಸಾನ್ ಸಭಾದ ಖಜಾಂಚಿ ಕೇರಳದ ಕೃಷ್ಣ ಪ್ರಸಾದ್ ಮಾತನಾಡಿ, ಕಾಫಿ ಬೆಳೆ ದೇಶದ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಬೆಳೆಗಾರರು ಮತ್ತು ಕಾರ್ಮಿಕರ ಬದುಕಿಗೆ ಆಶ್ರಯವಾಗಿದೆ ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಗಣನೀಯ ಮೊತ್ತವನ್ನು ತಂದುಕೊಡುತ್ತಿದೆ. ಇದರಲ್ಲಿ ಬೆನ್ನೆಲುಭಾಗಿರುವ ಬಹುತೇಕ ಮಂದಿ ಸಣ್ಣ ಬೆಳೆಗಾರರಾಗಿದ್ದು, ಪ್ರಕೃತಿ ವೈಪರೀತ್ಯ, ವನ್ಯ ಪ್ರಾಣಿಗಳ ಹಾವಳಿ ಮತ್ತು ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗದಿರುವುದರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಈ ಕಾರಣದಿಂದ ಸಣ್ಣ ರೈತರುಗಳು ಸಂಘಟಿತರಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಸಮಾವೇಶದ ಅಧ್ಯಕ್ಷತೆಯನ್ನು ಸೋಮವಾರಪೇಟೆಯ ಲಕ್ಷö್ಮಣ ವಹಿಸಿ ಮಾತನಾಡಿದರು. ಮಾರ್ಗದರ್ಶಕರಾಗಿ ಎ.ಐ.ಕೆ.ಎಸ್.ನ ರಾಜ್ಯ ಮುಖಂಡ ನವೀನ್ ಭಾಗವಹಿಸಿ ಸಣ್ಣ ರೈತರ ಸಮಸ್ಯೆಗಳು ಹಾಗೂ ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ದುರ್ಗಾಪ್ರಸಾದ್, ಮಹ್ಮದ್ ಹನೀಫ್, ನಿವೃತ್ತ ಶಿಕ್ಷಕ ಲತೀಫ್ ಸಭೆಯನ್ನುದ್ದೇಶಿಸಿ ಮಾತನಾಡಿದರು.