ಮಡಿಕೇರಿ, ಅ. ೨೦: ಮಡಿಕೇರಿ ತಾಲೂಕು ಸವಿತಾ ಸಮಾಜ, ಎಸ್.ಎಸ್. ಆಸ್ಪತ್ರೆ ಹಾಗೂ ಆರ್.ಕೆ. ಲ್ಯಾಬೋರೇಟರಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ ಆಗಿದ್ದು, ಈ ಬಗ್ಗೆ ಕಾಳಜಿ ಹೊಂದಬೇಕು. ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದರು. ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಆರೋಗ್ಯ ರಕ್ಷಣೆಗೆ ವಾಯು ವಿಹಾರ ಮತ್ತು ಯೋಗಾಭ್ಯಾಸ ಮಾಡಬೇಕೆಂದು ಕಿವಿಮಾತು ಹೇಳಿದರು.

ನಗರಸಭಾ ಮಾಜಿ ಅಧ್ಯಕ್ಷ ನಂದಕುಮಾರ್ ಅವರು ಸಾರ್ವಜನಿಕ ಕಾಳಜಿಯಿಂದ ಏರ್ಪಡಿಸಿರುವ ಆರೋಗ್ಯ ತಪಾಸಣಾ ಶಿಬಿರ ಶ್ಲಾಘನಾರ್ಹ ಎಂದರು. ಶಿಬಿರದ ರೂವಾರಿ ಡಾ. ಸತೀಶ್ ಮಾತನಾಡಿ, ಜಿಲ್ಲೆಯ ಎಲ್ಲ ಜನತೆಗೂ ಉಚಿತ ಆರೋಗ್ಯ ಶಿಬಿರ ಲಭ್ಯವಾಗುವಂತೆ ಮಾಡುವ ಉದ್ದೇಶವಿದ್ದು, ಹಲವು ಬಾರಿ ಶಿಬಿರ ನಡೆಸಿರುವ ಮಾಹಿತಿ ನೀಡಿದರು. ಸವಿತಾ ಸಮಾಜ ತಾಲೂಕು ಅಧ್ಯಕ್ಷ ಮಧು ಸತೀಶ್ ಅವರ ಸೇವೆಯನ್ನು ಮೆಚ್ಚಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಆರ್.ಕೆ. ಲ್ಯಾಬ್ ಮಾಲೀಕ ಪ್ರದೀಪ್ ಕುಮಾರ್ ಮಾತನಾಡಿದರು. ಅವಿನಾಶ್ ಬೊಟ್ಲಪ್ಪ ನಿರೂಪಣೆ, ಚರಣ್ ಬಲ್ಯದ ಸ್ವಾಗತ ಮಾಡಿದರು. ಈ ಸಂದರ್ಭ ಅತಿಥಿಗಳಿಗೆ ಗೌರವಿಸಲಾಯಿತು. ಶಿಬಿರದಲ್ಲಿ ಡಾ. ಶಿಲ್ಪಾ ಸತೀಶ್, ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ದೊರೇಶ್ ಹಾಜರಿದ್ದರು.