ನಾಪೋಕ್ಲು, ಅ. ೨೦: ಚೆಂಬು ಗ್ರಾಮದ ಆನೆ ಹಳ್ಳ ಅಂಗನವಾಡಿ ಕೇಂದ್ರದ ಅಂಗಳದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಪಂಪ್ ಹಾಗೂ ಪ್ರೌಢಶಾಲೆಯ ಬಳಿ ಇದ್ದ ವಿದ್ಯುತ್ ದೀಪವನ್ನು ಕಳುವು ಮಾಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಚೆಂಬು ಗ್ರಾಮಸ್ಥರು ಸಂಪಾಜೆ ಉಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

೨೦೧೯ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ರೂ. ೧೦ ಲಕ್ಷ ವೆಚ್ಚದಲ್ಲಿ ೨೦೧೯ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿತ್ತು. ಎರಡೂವರೆ ವರ್ಷಗಳ ಕಾಲ ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಘಟಕದ ಪಂಪ್ ಹಾಗೂ ಸರ್ಕಾರಿ ಪ್ರೌಢಶಾಲೆ ಬಳಿಯ ವಿದ್ಯುತ್ ದೀಪವನ್ನು ಕಳ್ಳತನ ಮಾಡಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು ಕೂಡಲೇ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಬೇಕಾಗಿ ಹಾಗೂ ತನಿಖೆ ಕೈಗೊಳ್ಳಬೇಕಾಗಿ ಗ್ರಾಮಸ್ಥರ ಪರವಾಗಿ ಊರುಬೈಲು ಹರೀಶ್ ಆಗ್ರಹಿಸಿದ್ದಾರೆ.

ನಿಗದಿತ ಅವಧಿ ಒಳಗೆ ಕುಡಿಯುವ ನೀರಿನ ಘಟಕವನ್ನು ಸರಿಪಡಿಸದಿದ್ದಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಸಂದರ್ಭ ಬಾಲಂಬಿ ನಾಗೇಶ್, ವಾಸುದೇವ ಕಾಚೇಲ್, ಜಯರಾಮ್, ನಿತಿನ್ ಕುಕ್ಕೆಟ್ಟಿ ಇದ್ದರು.