ಕಣಿವೆ, ಅ. ೨೦: ಕುಶಾಲನಗರದ ಬಾರವಿ ರವಿಚಂದ್ರನ್ ಕನ್ನಡ ಸಂಘದ ಪದಾಧಿಕಾರಿಗಳ ಸೇವೆ ಕೊಡಗು ಹಾಗೂ ಮೈಸೂರು ಜಿಲ್ಲೆಗೆ ಆದರ್ಶಪ್ರಾಯವಾಗಿದೆ ಹಾಗೂ ಅನನ್ಯವಾದುದು ಎಂದು ಮಾಜಿ ಸಂಸದ ವಿಜಯಶಂಕರ್ ಶ್ಲಾಘಿಸಿದರು.

ಮಂಗಳವಾರ ಕುಶಾಲನಗರದ ಪ್ರವೇಶದ್ವಾರ ಕೊಪ್ಪದ ಕಾವೇರಿ ಪ್ರತಿಮೆ ಮಹಾದ್ವಾರದಲ್ಲಿ ನೂತನವಾಗಿ ಅಳವಡಿಸಿದ ಪುನಿತ್ ರಾಜ್‌ಕುಮಾರ್ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ಪ್ರತಿಮೆಯನ್ನು ಕೇಂದ್ರ ಭಾಗವಾಗಿಸಿ ಅದರ ಪಕ್ಕದಲ್ಲಿ ನದಿಗೆ ಅಡ್ಡಲಾಗಿ ಮತ್ತೊಂದು ಸೇತುವೆಯನ್ನು ನಿರ್ಮಿಸುವ ಸಂಬAಧ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಹೇಳಿದರು. ಪ್ರತಿ ವರ್ಷವೂ ಕಾವೇರಿ ತುಲಾ ಸಂಕ್ರಮಣದAದು ಭಕ್ತರಿಗೆ ಉಚಿತವಾಗಿ ಕಾವೇರಿ ತೀರ್ಥವನ್ನು ವಿತರಿಸುವ ಮೂಲಕ ಪುಣ್ಯದ ಕಾರ್ಯಗಳನ್ನು ಮಾಡುತ್ತಿರುವ ಬಾರವಿ ಸೋದರರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತ ಕಾವೇರಮ್ಮನ ಪ್ರತಿಮೆಗೆ ವಿಶೇಷವಾದ ಪೂಜೆ ನಡೆಯಿತು. ಅಲ್ಲದೇ ನೆರೆದ ಸಹಸ್ರಾರು ಭಕ್ತರಿಗೆ ಸನ್ನಿಧಿಯಲ್ಲಿ ಕಾವೇರಿ ತೀರ್ಥ ಹಾಗೂ ಅನ್ನಪ್ರಸಾದ ವಿತರಿಸಲಾಯಿತು.

ಅರ್ಚಕ ಪ್ರಸನ್ನಕುಮಾರ್ ಭಟ್ ಪೂಜಾ ವಿಧಿ ನಡೆಸಿಕೊಟ್ಟರು. ಈ ಸಂದರ್ಭ ಬಾರವಿ ಸೋದರರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಪ್ರಮುಖರಾದ ಚಂದ್ರು, ಮಹದೇವ್, ಎಂ. ಕೃಷ್ಣ ಮೊದಲಾದವರಿದ್ದರು.