ಸಿದ್ದಾಪುರ, ಅ. ೨೦: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವನಧನ ವನಸಿರಿ ವಿಕಾಸ್ ಯೋಜನೆಯ ಕಾರ್ಯಕ್ರಮ ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬುಡಕಟ್ಟು ಮಹಿಳೆಯರು ಸಬಲರಾಗುವಂತೆ ಕರೆ ನೀಡಿದರು.
ಸಂಜೀವಿನಿ ಸ್ತಿçÃಶಕ್ತಿ ಸ್ವಸಹಾಯ ಸಂಘದ ಜಿಲ್ಲಾ ವ್ಯವಸ್ಥಾಪಕ ಕುಮಾರ್ ಮಾತನಾಡಿ, ಬುಡಕಟ್ಟು ಸಮುದಾಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವನಸಿರಿ ವನಧನ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಉತ್ಪನ್ನಗಳಾದ ಜೇನುತುಪ್ಪ, ನೆಲ್ಲಿಕಾಯಿ, ಕಾಚಂಪುಳಿ, ಸೀಗೆಕಾಯಿ, ಮರದ ಚೆಕ್ಕೆಗಳನ್ನು ಸಂಗ್ರಹಿಸಿ ದರ ನಿಗದಿಪಡಿಸಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಇದರ ಮೂಲ ಉದ್ದೇಶ ಆಗಿದೆ ಎಂದು ಮಾಹಿತಿ ನೀಡಿದರು. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ತಾಲೂಕು ವ್ಯವಸ್ಥಾಪಕ ಯೋಗೇಶ್, ವಲಯ ಅಧಿಕಾರಿ ಸೋಮಶೇಖರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೇವಜಾನು ಹಾಗೂ ಪದಾಧಿಕಾರಿಗಳಾದ ಎಂ.ಎ. ಯಮುನಾ, ಸುಮತಿ, ವಸಂತಿ, ರೋಹಿಣಿ, ಪುಷ್ಪ, ಉಷಾ, ಭಾನು, ಸರ್ಪು, ನಿಷ, ಮಂಜುಳ, ಪ್ರಮಿಳಾ ಹಾಜರಿದ್ದರು.
ಈ ಸಂದರ್ಭ ವನಸಿರಿ ವನಧನದ ಯೋಜನೆಯ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಸ್.ಕೆ. ಸುಶೀಲ, ಕಾರ್ಯದರ್ಶಿಯಾಗಿ ಇಂದಿರ, ಸಹಕಾರ್ಯದರ್ಶಿಯಾಗಿ ಮಂಜುಳಾ ಅವರನ್ನು ಆಯ್ಕೆ ಮಾಡಲಾಯಿತು.