ಮಡಿಕೇರಿ, ಅ. ೨೦: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದು, ಸ್ಪಂದನ ಸಿಗದ ಹಿನ್ನೆಲೆಯಲ್ಲಿ ನ. ೨ರಿಂದ ಧರಣಿ ನಡೆಸಲು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಯಲಿದೆ.

ಗ್ರಾಮ ಪಂಚಾಯಿತಿಗಳಿಗೆ ನಾವಿಕನಂತೆ ಇರುವ ಪಿಡಿಓಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುವ ವಾತಾವರಣ ಇದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಹಲವು ಬಾರಿ ಸರಕಾರದ ಗಮನ ಸೆಳೆದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗದ ಕಾರಣ ಈಗ ಅನಿವಾರ್ಯವಾಗಿ ಹೋರಾಟಕ್ಕೆ ಇಳಿದಿರುವುದಾಗಿ ಹೇಳುತ್ತಿದ್ದಾರೆ.

ನ.೨ರ ಬೆಳಗ್ಗೆ ೧೧ ಗಂಟೆಯಿAದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭ ಆಗಲಿದೆ. ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಧರಣಿಯ ನೇತೃತ್ವ ವಹಿಸಿದ್ದು, ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪಿಡಿಒಗಳು ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹೊರತುಪಡಿಸಿ ಗ್ರಾ.ಪಂ.ಗಳಿAದ ನಡೆಯುವ ಎಲ್ಲಾ ಕೆಲಸಗಳನ್ನು ಅನಿರ್ದಿಷ್ಟಾವಧಿ ತನಕ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ. ಧರಣಿ ಆರಂಭವಾದ ಕೂಡಲೇ ಅಥವಾ ಅದಕ್ಕೂ ಮೊದಲೇ ಪಿಡಿಓಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದರೆ ಜನ ಸಾಮಾನ್ಯರಿಗೆ ಸಮಸ್ಯೆ ಆಗುವ ಎಲ್ಲಾ ಸಾಧ್ಯತೆಗಳಿವೆ.

ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರವನ್ನು ವಿಕೇಂದ್ರಿಕರಣ ಮಾಡಲಾಗಿದ್ದು ಪಂಚಾಯಿತಿಗಳ ಬಹುತೇಕ ಜವಾಬ್ದಾರಿಗಳು ಪಿಡಿಒಗಳ ಹೆಗಲಿಗೆ ಬಿದ್ದಿದೆ. ಇದರ ಜೊತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಕಿರುಕುಳ, ಬೇರೆ ಬೇರೆ ಇಲಾಖೆಗಳ ಜವಾಬ್ದಾರಿ, ಮೇಲಾಧಿಕಾರಿಗಳ ಒತ್ತಡ ಹೈರಾಣಾಗಿಸುತ್ತಿದೆ. ಇದರಿಂದಾಗಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವ ನೋವು ಪಿಡಿಓಗಳದ್ದು.

-ಸುನಿಲ್ ಪೊನ್ನೇಟಿ

ಪಿಡಿಓ ಬೇಡಿಕೆಗಳು:

*ಗ್ರಾ.ಪಂ.ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಮೇಲೆ ನಿರಂತರ ಹಲ್ಲೆಗೆ ಖಂಡನೆ, ಹಲ್ಲೆ ನಡೆಸುವವರ ಮೇಲೆ ಗೂಂಡಾ ಕಾಯಿದೆ ಜಾರಿಗೆ ಒತ್ತಾಯ.

* ಕೋವಿಡ್‌ನಿಂದ ಮರಣ ಹೊಂದಿದ ಪಿಡಿಓ, ಕಾರ್ಯದರ್ಶಿ, ಎಸ್‌ಡಿಎ ಹಾಗೂ ಪಂಚಾಯಿತಿ ಸಿಬ್ಬಂದಿಗೆ ಕೂಡಲೇ ಪರಿಹಾರ ಧನ ಪಾವತಿ.

* ಅವೈಜ್ಞಾನಿಕವಾಗಿ ಗುರಿ ನಿಗದಿಪಡಿಸಿ, ಗುರಿ ಸಾಧಿಸಲು ಒತ್ತಡ ಹೇರುವುದು ಬಿಡಬೇಕು.

* ಅನ್ಯ ಇಲಾಖೆ ಕೆಲಸ ವಹಿಸುವುದು ಸಂಪೂರ್ಣ ರದ್ದು ಮಾಡಬೇಕು.

* ಮನರೆಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಯ ಲೋಕಾಯುಕ್ತ ತನಿಖೆ ವಾಪಸ್ ಪಡೆಯಬೇಕು.

* ಪಿಡಿಒ ಹುದ್ದೆಯನ್ನು ಗ್ರೂಪ್ ಬಿ ಗೆ ಮೇಲ್ದರ್ಜೆಗೆ ಏರಿಸಬೇಕು.

* ಪಿಡಿಓಗಳ ರಾಜ್ಯಮಟ್ಟದ ಜೇಷ್ಠತಾ ಪಟ್ಟಿ ತಯಾರಿಸಿ ಪ್ರಕಟಿಸಬೇಕು.

* ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಪಿಡಿಓಗಳಿಗೆ ಬಡ್ತಿ ನೀಡಬೇಕು.

* ಅಧಿಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗ ಮಾಡುವ ನಿಯಮ ಜಾರಿ ಮಾಡಬೇಕು.

* ವಿಶೇಷ ನಿಯಮ ರಚಿಸಿ ನೌಕರರು ಇಚ್ಛಿಸುವ ಜಿಲ್ಲೆಗೆ ಒಂದು ಬಾರಿ ವರ್ಗ ಮಾಡಬೇಕು.

* ಮನರೇಗಾ ಕೂಲಿಕಾರರ ಹಾಜರಾತಿ ಪಡೆಯಲು ಬಯೋಮೆಟ್ರಿಕ್ ಜಾರಿ ಮಾಡಬೇಕು.