ಮಡಿಕೇರಿ, ಅ. ೧೯: ಕಾವೇರಿ ನದಿ ಸಂರಕ್ಷಣೆಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಲಕಾವೇರಿಯಿಂದ ಪೂಂಪ್‌ಹಾರ್ ತನಕ ೧೨ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಾ.೨೧ರಿಂದ ಆರಂಭಗೊಳ್ಳಲಿದ್ದು, ತಲಕಾವೇರಿಯಲ್ಲಿ ಬೆಳಿಗ್ಗೆ ೮.೩೦ ಗಂಟೆಗೆ ಚಾಲನೆ ದೊರೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ಅಣ್ಣೆöÊ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ೨೪ ದಿನಗಳ ಕಾವೇರಿ ಜಾಗೃತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ೪೦ಕ್ಕೂ ಅಧಿಕ ಸಾಧುಸಂತರು ಭಾಗವಹಿಸಲಿದ್ದಾರೆ ಎಂದರು.

ಜನ, ಜಾನುವಾರು, ಸಸ್ಯ ಸಂಕುಲಗಳು, ರೈತಾಪಿ ವರ್ಗದ ಜೀವನಾಡಿಯಾಗಿರುವ ಕಾವೇರಿ ನದಿ ಮಲೀನಗೊಂಡಿದೆ. ಆದ್ದರಿಂದ ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ನೆಲ, ಜಲ, ಪರಿಸರ ರಕ್ಷಣೆಯಲ್ಲಿ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ನದಿಯ ರಕ್ಷಣೆಗೆ ಮುಂದಾಗಬೇಕು. ನದಿ ತಟಗಳ ಒತ್ತುವರಿ ತೆರವುಗೊಳಿಸಬೇಕು. ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಹರಿಯದಂತೆ ಎಚ್ಚರ ವಹಿಸಬೇಕು. ಮರಗಳ ಹನನಕ್ಕೆ ಕಡಿವಾಣ ಹಾಕಬೇಕು. ನದಿ ದಂಡೆಯಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದಿಂದ ಮೊದಲ ಬಾರಿಗೆ ಕಾವೇರಿ ನದಿ ಉತ್ಸವ ನಡೆಸಲಾಗುತ್ತಿದ್ದು, ತಾ.೨೧ರಂದು ಬೆಳಿಗ್ಗೆ ೮.೩೦ ಗಂಟೆಗೆ ತಲಕಾವೇರಿಯಲ್ಲಿ ಚಾಲನೆ ನೀಡಲಾಗುವುದು. ಇದಕ್ಕೂ ಸರ್ವರ ಸಹಕಾರ ಬಯಸಿದರು.

ಸಮಿತಿಯ ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್ ಮಾತನಾಡಿ, ಗಂಗಾ ನದಿಯನ್ನು ಶುದ್ಧೀಕರಣ ಮಾಡಿದಂತೆ ಕಾವೇರಿ ನದಿಯ ಶುದ್ಧೀಕರಣ ವಾಗಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಯೋಜನೆ ರೂಪಿಸುವ ಭರವಸೆ ನೀಡಿದ್ದಾರೆ. ನಾಡಿನ ಜೀವನದಿ ಕಾವೇರಿಯ ಸರ್ಕಾರಿ ಕಾರ್ಯಕ್ರಮಕ್ಕಾಗಿ ಜಲಸಂಪನ್ಮೂಲ ಸಚಿವರಿಗೂ ಬೇಡಿಕೆ ಇಟ್ಟಿದ್ದು, ಕಾವೇರಿ ನಿಗಮದಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಹೇಳಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಿ ನಿಯೋಗ ತೆರಳಿ ಗಂಗೆಯAತೆ ಕಾವೇರಿಯ ಶುದ್ಧೀಕರಣಕ್ಕಾಗಿ ಯೋಜನೆ ರೂಪಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಬೋಸ್ ಮೊಣ್ಣಪ್ಪ, ಸೋಮಶೇಖರ್, ವನಿತಾ ಚಂದ್ರಮೋಹನ್ ಹಾಜರಿದ್ದರು.