ಮಡಿಕೇರಿ, ಅ. ೧೯: ಕಾವೇರಿ ಸಂಕ್ರಮಣ ಮುಗಿದರೂ ಕೊಡಗು ಜಿಲ್ಲೆಯಾದ್ಯಂತ ಇನ್ನೂ ಮಳೆಯ ವಾತಾವರಣ ಮಾತ್ರ ದೂರಾದಂತಿಲ್ಲ. ವಾತಾವರಣದಲ್ಲಿನ ಅಸಹಜತೆಯಿಂದಾಗಿ ಇನ್ನೂ ಮಳೆಯ ಸನ್ನಿವೇಶ ಮುಂದುವರಿಯುತ್ತಲೇ ಇದೆ. ಕಳೆದ ಜೂನ್ ತಿಂಗಳಿನಿAದಲೇ ಮಳೆಯ ಅನುಭವ ಎದುರಿಸುತ್ತಿರುವ ಜನರು ಈಗಲೂ ಪರಿತಪಿಸುವಂತಾಗಿದ್ದು, ಬಿಸಿಲಿನ ವಾತಾವರಣಕ್ಕೆ ಎದುರು ನೋಡುತ್ತಿದ್ದಾರೆ.

ಜಿಲ್ಲೆಯ ಅಲ್ಲಲ್ಲಿ ಮೋಡ ಕವಿದ ವಾತಾವರಣವೇ ಕಂಡುಬರುತ್ತಿದ್ದು, ಎಲ್ಲಿ ಯಾವ ಕ್ಷಣದಲ್ಲಿ ದಿಢೀರನೆ ಬಿರುಮಳೆ ಸುರಿಯುತ್ತದೆ ಎಂದು ಊಹಿಸುವುದು ಕೂಡ ಕಷ್ಟಕರವಾಗಿದೆ. ಬಿಸಿಲಿನ ವಾತಾವರಣದ ನಡುವೆಯೇ ಏಕಾಏಕಿ ಮೋಡ ಆವರಿಸುವುದರೊಂದಿಗೆ ಮಳೆ ಸುರಿಯಲಾರಂಭಿಸುತ್ತದೆ. ಮಳೆ ಮಾತ್ರವಲ್ಲ, ಈ ಅವಧಿಯಲ್ಲೂ ಗುಡುಗು-ಮಿಂಚಿನ ಅನುಭವವಾಗುತ್ತಿರುವುದು ಕೂಡ ವಿಚಿತ್ರವೆನಿಸಿದೆ.