ಗೋಣಿಕೊಪ್ಪಲು, ಅ. ೨೦: ದಕ್ಷಿಣ ಕೊಡಗಿನ ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನಲ್ಲಿ ರೂ. ೧೨ ಕೋಟಿ ವಹಿವಾಟು ನಡೆಸಿ ೯.೩೦ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ತಡಿಯಂಗಡ ಡಿ. ಸುಬ್ಬಯ್ಯ ಅವರು ತಿಳಿಸಿದರು. ಸಂಘದ ೪ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಒಟ್ಟು ೬.೧೪ ಕೋಟಿ ಸಾಲ ವಿತರಿಸಲಾಗಿದೆ. ೩.೮೪ ಕೋಟಿ ಮೌಲ್ಯದ ರಸಗೊಬ್ಬರ (೧೮೯೦ ಟನ್) ಕೀಟನಾಶಕ, ಸಿಮೆಂಟ್ ಹಾಗೂ ಕೃಷಿ ಉಪಕರಣಗಳ ವ್ಯಾಪಾರ ನಡೆಸಿ ೧೫.೮೪ ಲಕ್ಷ ವ್ಯಾಪಾರ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಮುಂದೆಯೂ ಸಂಘದ ಸದಸ್ಯರುಗಳಿಗೆ ತಮ್ಮ ಸೇವೆ ನೀಡಲು ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮುಂದುವರೆಸಲಿದೆ ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸಿ.ಕೆ. ಗಣಪತಿ, ನಿರ್ದೇಶಕರುಗಳಾದ ಎ.ಡಿ. ಮುಕುಂದ, ಎ.ಬಿ. ಮುತ್ತಪ್ಪ, ಎಂ.ಸಿ. ಸುರೇಶ್, ಬಿ.ಕೆ. ಬಾಬು, ಹೆಚ್.ಯು. ರಾಮಚಂದ್ರ, ಸಿ.ಕೆ. ಪಾಲಿ, ಪಿ.ಸಿ. ಕಾಳ, ಎಂ.ವಿ. ಆಶಾ, ಕೆಡಿಸಿಸಿ ಬ್ಯಾಂಕ್ ಮೇಲ್ವೀಚಾರಕಿ ಎಸ್.ಪಿ. ರಕ್ಷಿತ ಹಾಗೂ ಸಿಇಓ ಕೆ.ಎಸ್. ಕುಶಾಲಪ್ಪ ಅವರು ಹಾಜರಿದ್ದರು.