ಚೆಯ್ಯಂಡಾಣೆ, ಅ. ೨೦: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ, ಅಯ್ಯಪ್ಪ ಯುವಕ ಸಂಘ, ಸ್ಥಳೀಯ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಚೆಯ್ಯಂಡಾಣೆಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಹಾದಾನ. ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಮನುಷ್ಯನ ರಕ್ತಕ್ಕೆ ಬೇರೆ ಯಾವುದೇ ಕೃತಕ ವಸ್ತು ಇಲ್ಲ. ಪರ್ಯಾಯ ಮಾರ್ಗ ಇಲ್ಲ. ಮನುಷ್ಯನ ರಕ್ತವೇ ಪರ್ಯಾಯ. ರಕ್ತದ ಸಮಸ್ಯೆಯಿಂದ ನೂರಾರು ರೋಗಿಗಳು ದಿನನಿತ್ಯ ಆಸ್ಪತ್ರೆಯಲ್ಲಿ ರಕ್ತದ ಕೊರತೆಯಿಂದ ನರಳುತ್ತಿರುವ ಈ ಸನ್ನಿವೇಶದಲ್ಲಿ ಅಂತವರ ಸಹಾಯಕ್ಕಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಆಯೋಜನೆ ತುಂಬಾ ಸಹಕಾರಿಯಾಗಿದೆ ಎಂದರು.

ಚೆಯ್ಯAಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಉತ್ತಪ್ಪ ಭರತ್ ಮಾತನಾಡಿ, ರಕ್ತದಾನದಿಂದ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ವೈದ್ಯರು ಯಾವ ರೀತಿಯಲ್ಲಿ ಜೀವ ಉಳಿಸುತ್ತಾರೋ ಅದೇ ರೀತಿಯಲ್ಲಿ ರಕ್ತದಾನ ಮಾಡಿ ಸಾರ್ವಜನಿಕರೂ ಜೀವ ಉಳಿಸಿ ವೈದ್ಯರಾಗಬಹುದು. ಗ್ರಾಮ ಪಂಚಾಯಿತಿ, ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಈ ಸಂದರ್ಭ ಒಟ್ಟು ೪೦ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೆಳಿಯಂಡ್ರ ಹರಿಪ್ರಸಾದ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಅಯ್ಯಪ್ಪ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಆರೋಗ್ಯ ಸಹಾಯಕಿ ಕನಕಾವತಿ ಸ್ವಾಗತಿಸಿ, ವಂದನೆಯನ್ನು ಪ್ರಸನ್ನ ಕುಮಾರಿ ನಿರ್ವಹಿಸಿದರು.