ಕುಶಾಲನಗರ, ಅ. ೧೯ : ಮೊದಲ ಬಾರಿಗೆ ಸರಕಾರದಿಂದ ಆಯೋಜಿಸಲಾಗುತ್ತಿರುವ ಕಾವೇರಿ ನದಿ ಉತ್ಸವವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ತಾ. ೨೧ರಂದು ನಡೆಯಲಿರುವ ಕಾವೇರಿ ನದಿ ಉತ್ಸವ - ೨೦೨೨ರ ಹಿನ್ನೆಲೆಯಲ್ಲಿ ಇಲ್ಲಿನ ವಾಸವಿ ಮಹಲ್‌ನಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕಾವೇರಿ ನದಿ ಮತ್ತು ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುಮಾರು ೨೫ ಲಕ್ಷ ರೂ. ಖರ್ಚು ಮಾಡಿ ಕಾವೇರಿ ನದಿ ಉತ್ಸವ ಆಚರಿಸಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈ ಸಂಬAಧ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಹಾಗೂ ತಂಡ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಪಡುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿಯ ಅರ್ಧದಷ್ಟು ಭಾಗಕ್ಕೆ ಕಾವೇರಿ ನೀರಿನಿಂದ ಉಪಯೋಗ ಇದೆ. ಹಾಗಾಗಿ ಕಾವೇರಿ ನದಿ ಉತ್ಸವದ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರದ ಅಗತ್ಯವಿದೆ. ಮುಂದಿನ ವರ್ಷಗಳಲ್ಲೂ ಈ ಉತ್ಸವ ಆಯೋಜಿಸುವಂತಾಗಲು ಮೊದಲ ಬಾರಿಗೆ ನಡೆಸುತ್ತಿರುವ ಈ ಕಾರ್ಯಕ್ರಮ ಮಾದರಿ ಆಗಿರಬೇಕು ಎಂದು ಹೇಳಿದರು.

ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಮತ್ತು ಕಾರ್ಯಕ್ರಮದ ಬಗ್ಗೆ ಸಂಘ ಸಂಸ್ಥೆಗಳ ಪ್ರಮುಖರಿಂದ ಮಾಹಿತಿ ಪಡೆದ ಶಾಸಕ ರಂಜನ್ ಪಟ್ಟಣದ ಮಾರಿಯಮ್ಮ, ಗಣಪತಿ ದೇವಾಲಯಗಳಿಗೆ ಅಲಂಕಾರ ಮಾಡಬೇಕು. ಕಾರ್ಯಕ್ರಮಗಳಲ್ಲಿ ಸಮಯ ಪರಿಪಾಲನೆ ಮಾಡಬೇಕು ಎಂದು ಸೂಚಿಸಿದರು. ತಾ. ೨೧ರಂದು ಬೆಳಿಗ್ಗೆ ೬ ಗಂಟೆಗೆ ಕುಶಾಲನಗರದಿಂದ ತಲಕಾವೇರಿಗೆ ಬಸ್ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಮುತ್ತುಸ್ವಾಮಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ಕುಡಾ ಅಧ್ಯಕ್ಷ ಎಂ.ಎA. ಚರಣ್, ಕೂಡು ಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮೊಣ್ಣಪ್ಪ, ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಡಿವೈಎಸಿ ಗಂಗಾಧರಪ್ಪ್ಪ, ವೃತ್ತ ನಿರೀಕ್ಷಕ ಮಹೇಶ್, ಉಪತಹಶೀಲ್ದಾರ್ ಮಧುಸೂದನ್,

ಪುಂಡರಿಕಾಕ್ಷ ವೇದಿಕೆಯಲ್ಲಿದ್ದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.