ವೀರಾಜಪೇಟೆ/ಚೆಟ್ಟಳ್ಳಿ ಅ. ೧೮: ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಬೇಡು ಹಬ್ಬ ತನ್ನದೇ ಐತಿಹ್ಯವನ್ನು ಹೊಂದಿದೆ. ಇತಿಹಾಸ ಪ್ರಸಿದ್ಧವಾದ ದಕ್ಷಿಣ ಕೊಡಗಿನ ಪರಗಟಗೇರಿ ವ್ಯಾಪ್ತಿಯ ಕುಂದ ಬೆಟ್ಟದಲ್ಲಿ ಜಿಲ್ಲೆಯ ಮೊದಲ ಬೇಡು ಹಬ್ಬಕ್ಕೆ ಶ್ರದ್ಧಾಭಕ್ತಿಯಿಂದ ನಡೆಯಿತು.

ತಾ. ೧೭ ರಂದು ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆತು ತಾ.೧೮ ರಂದು ಮುಕ್ಕಾಟಿ ಬಾಣೆ ಅಂಬಲದಿAದ ವಿಶೇಷ ಪೂಜೆ ಪುನಸ್ಕಾರಗಳು ನಡೆಸಿ ಬಿದಿರಿನಿಂದ ಕೃತಕವಾಗಿ ತಯಾರಿಸಿದ ಕುದುರೆಯನ್ನು ಹೊತ್ತ ವ್ರತಧಾರಿಗಳು ಸಾಂಪ್ರಾದಾಯಿಕ ವಾಲಗದೊಂದಿಗೆ ಕುಂದ ಬೆಟ್ಟಕ್ಕೆ ಹೆಜ್ಜೆ ಹಾಕುತ್ತ ಹಬ್ಬವನ್ನು ಆಚರಿಸಿದರು. ವರ್ಷಂಪ್ರತಿ ತಲಕಾವೇರಿಯ ತೀರ್ಥೋದ್ಭವ ದಂದು ಆಚರಿಸುವ ಜಿಲ್ಲೆಯ ಮೊದಲ ಬೇಡುಹಬ್ಬ ಇದಾಗಿದೆ.

‘ಬೊಟ್ಟ್ಲ್ ಈಶ್ವರ’ ಎಂದು ಕರೆಯಲ್ಪಡುವ ಕುಂದ ಬೆಟ್ಟ ಹಲವಾರು ವಿಸ್ಮಯವನ್ನು ತನ್ನೊಡಲಲ್ಲಿ ತುಂಬಿಕೊAಡಿದೆ. ಪುರಾಣದಲ್ಲಿ ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿ ಇದ್ದರು ಎಂಬ ಪ್ರತೀತಿ ಕೂಡ ಇದೆ. ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬ ಆಚರಣೆಯ ನೇತೃತ್ವ ವಹಿಸಿಕೊಳ್ಳುತ್ತದೆ.

ಪುರಾತನ ಸಂಪ್ರದಾಯದAತೆ ವಾರದ ಹಿಂದೆ ಹಬ್ಬಕ್ಕೆ ಕಟ್ಟು ಬಿದ್ದು ತೀರ್ಥೋದ್ಭವದ ದಿನ ರಾತ್ರಿ ಮನೆಕಳಿ ನಡೆಯಿತು. ಮಧ್ಯಾಹ್ನ ದೇವಾಲಯದ ಭಂಡಾರ ತಕ್ಕರಾದ ಸಣ್ಣುವಂಡ ಹಾಗೂ ಮನೆಯಪಂಡ ಐನ್‌ಮನೆಯಿಂದ ಓಡ್ಡೋಲಗ ದೊಂದಿಗೆ ಕೃತಕವಾಗಿ ಶೃಂಗರಿಸಲಾದ ಕುದುರೆಯನ್ನು ಹೊತ್ತ ವ್ರತಧಾರಿಗಳು ಅಂಬಲದಲ್ಲಿ ಸೇರಿ ಪ್ರಾರ್ಥನೆ ನೆರವೇರಿಸಿ ಕುಂದ ಬೆಟ್ಟವನ್ನು ಏರಲು ಆರಂಭಿಸುತ್ತಾರೆ. ಈ ಸಂದರ್ಭ ವಾಲಗಕ್ಕೆ ಹೆಜ್ಜೆ ಹಾಕುತ್ತ ಪಯಣ ಬೆಳೆಸಿ ದೇವಾಲಯದ ಸುತ್ತಲು ಕುದುರೆ ಜೊತೆಗೆ ಕುಣಿಯುವ ಮೂಲಕ ಹರಕೆ ಒಪ್ಪಿಸುತ್ತಾರೆ. ಈ ವೇಳೆ ವಿವಿಧ ವೇಷಧಾರಿಗಳ ಕುಣಿತ ಗಮನ ಸೆಳೆಯಿತು. ಭಕ್ತಾದಿಗಳು ಜೊತೆಗೆ ಬಂದು ದೇವರಿಗೆ ಹರಕೆ ಒಪ್ಪಿಸಿದರು.

ನಂತರದಲ್ಲಿ ಅಂಬಲಕ್ಕೆ ಬಂದು ಬಿದಿರಿನ ಕೃತಕ ಕುದುರೆಯನ್ನು ತೆಗೆಯುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು. ಈ ಬೆಟ್ಟದಲ್ಲಿ ವರ್ಷದಲ್ಲಿ ಎರಡು ಬಾರಿ ಮಾತ್ರ ವಿಶೇಷ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸ ಹೊರತು ಪಡಿಸಿದರೆ ಬೇಡು ಹಬ್ಬದ ದಿನ ಪೂಜೆ ನಡೆಯುವ ಮೊದಲ ದಿನವಾಗಿದೆ.

-ವರದಿ : ಈಶಾನ್ವಿ, ಕರುಣ್‌ಕಾಳಯ್ಯ