ಕಣಿವೆ, ಅ. ೧೮: ಕುಶಾಲನಗರ ಪಟ್ಟಣದ ಸೆರಗಿನಲ್ಲಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆ ಕಾವೇರಿ ನದಿಯ ದಂಡೆಯಲ್ಲಿದೆ. ಈ ಬಡಾವಣೆಯಲ್ಲಿ ೬೦ಕ್ಕೂ ಹೆಚ್ವಿನ ಮನೆಗಳಿವೆ. ಅಂದರೆ ಸರಿ ಸುಮಾರು ೩೦೦ಕ್ಕೂ ಅಧಿಕ ಜನಸಂಖ್ಯೆ ಇದೆ. ಅಷ್ಟಕ್ಕೂ ಇಲ್ಲಿ ವಾಸವಿರುವ ಬಹುತೇಕರಲ್ಲಿ ದೇಶದ ಗಡಿಗಳನ್ನು ಕಾದಿರುವ ನಿವೃತ್ತ ಯೋಧರಿದ್ದಾರೆ. ನಿವೃತ್ತ ಹಾಗೂ ನೌಕರರಿದ್ದಾರೆ.
ಆದರೇನು? ಈ ಸಜ್ಜನ ಸಾರ್ವಜನಿಕ ಮಂದಿಗೆ ಸ್ಥಳೀಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಯಲ್ಲಿ ಈ ಹಿಂದೆ ಆಡಳಿತ ನಡೆಸಿ ರುವ ಮತ್ತು ಈಗಲೂ ಅಸ್ತಿತ್ವದಲ್ಲಿರುವ ಆಡಳಿತ ಮಂದಿ ಕಳೆದ ಹತ್ತಾರು ವರ್ಷಗಳಿಂದಲೂ ಈ ಬಡಾವಣೆಯ ಮಂದಿಗೆ ಕುಡಿಯುವ ಪರಿಶುದ್ಧ ಕಾವೇರಿ ನೀರನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಕುಶಾಲನಗರ ಪಟ್ಟಣವೂ ಸೇರಿದಂತೆ ಮುಳ್ಳುಸೋಗೆಯ ಬಹುತೇಕ ಜನವಸತಿ ಪ್ರದೇಶಕ್ಕೆ ಕುಶಾಲನಗರದ ಜಲಮಂಡಳಿ ಕುಡಿವ ನೀರನ್ನು ಒದಗಿಸುತ್ತಿದೆ. ಆದರೆ ಈ ಕುವೆಂಪು ಬಡಾವಣೆಯ ಮಂದಿ ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಇದುವರೆಗೂ ಮುಳ್ಳುಸೋಗೆ ಪಂಚಾಯಿತಿಯಾಗಲೀ ಜಲಮಂಡಳಿ ಯಾಗಲೀ ಈ ಕುವೆಂಪು ನಿವಾಸಿಗಳಿಗೆ ಏಕೆ ಕಾವೇರಿ ನೀರನ್ನು ಹರಿಸಲು ಸಾಧ್ಯವಾಗಿಲ್ಲ ಎಂದು ಬಡಾವಣೆಯ ನಿವಾಸಿಗಳನೇಕರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.
ಮಳೆಗಾಲದಲ್ಲಿ ಕಳೆದ ಮೂರು ವರ್ಷಗಳಿಂದಲೂ ಕಾವೇರಿ ನದಿ ಕಾವು ಏರಿ ಬಡಾವಣೆಯಲ್ಲೆಲ್ಲಾ ಹರಿದು ಇಲ್ಲಿನ ಜನವಸತಿಗಳನ್ನು ಆವರಿಸಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತಿದ್ದರೂ
(ಮೊದಲ ಪುಟದಿಂದ) ಕೂಡ ಈ ಪರಮ ಪಾವನೆಯ ತೀರ್ಥವನ್ನು ನಾವು ಏಕೆ ಸವಿಯಲಾಗುತ್ತಿಲ್ಲ ಎಂದು ಬಡಾವಣೆಯ ನಿವಾಸಿ ಪಟ್ಟಂದಿ ಬೀನಾ ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಕಾವೇರಿ ನೀರನ್ನು ಕುಡಿಯಲು ಕೊಡಿ ಅಂತಾ ಪಂಚಾಯಿತಿಯನ್ನು ಕೇಳಿದರೆ ಪ್ರತೀ ಮನೆ ಮನೆಗೆ ತಲಾ ರೂ. ೩ ಸಾವಿರ ಹಣ ಕಟ್ಟಿ ಅಂತಾ ಕೇಳ್ತಾರೆ. ಈಗಾಗಲೇ ಇಲ್ಲಿ ಮನೆಗಳನ್ನು ಕಟ್ಟಿ ವಾಸವಿರುವ ಎಲ್ಲರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ ನೀರಿನ ಯಾಂತ್ರಿಕ ಕೊಳವೆ ಬಾವಿಯನ್ನು ಅಳವಡಿಸಿಕೊಂಡಿದ್ದಾರೆ.
ಅಲ್ಲದೇ ಬಹುತೇಕ ನಿವಾಸಿಗಳು ಈ ಕೊಳವೆ ಬಾವಿಯ ನೀರಿಗೆ ನೀರಿನ ಶುದ್ಧೀಕರಣ ಯಂತ್ರಗಳನ್ನು ಹಾಕಿಕೊಂಡು ನೀರು ಕುಡಿಯುತ್ತಿದ್ದಾರೆ. ಅಂತಹುದರಲ್ಲಿ ಈ ಪಂಚಾಯಿತಿಗೆ ನಾವೇಕೆ ತಲಾ ಮೂರು ಸಾವಿರ ಹಣ ಕಟ್ಟಬೇಕು?
ಕಣ್ಣೆದುರೇ ಹರಿಯುವ ಕಾವೇರಿಯ ನೀರನ್ನು ಪಂಚಾಯಿತಿಯವರು ಉಚಿತವಾಗಿ ಏಕೆ ಸಂಪರ್ಕ ಕಲ್ಪಿಸಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ಗಡಿಗಳನ್ನು ಕಾದು ವಿಶ್ರಾಂತ ಜೀವನದ ಕನಸು ಕಂಡು ಇಲ್ಲಿ ಮನೆ ಕಟ್ಟಿಕೊಂಡಿರುವ ನಿವೃತ್ತ ಯೋಧರಿಗೆ ಪಂಚಾಯಿತಿಯವರು ಕೊನೇ ಪಕ್ಷ ಕುಡಿವ ಕಾವೇರಿ ನೀರನ್ನು ಕೊಡಲಿಲ್ಲ ಎಂದರೆ ಇನ್ನೇನು ಕೊಟ್ಟಾರು? ಎಂದು ಬಡಾವಣೆಯ ನಿವಾಸಿಗಳು ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ನಮ್ಮ ಬಡಾವಣೆಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
-ವಿಶೇಷ ವರದಿ : ಕೆ.ಎಸ್.ಮೂರ್ತಿ