ಸುಂಟಿಕೊಪ್ಪ, ಅ. ೧೭: ಮಲೆಯಾಳಿ ಸಮಾಜದ ಸಂಸ್ಕೃತಿ ಆಚಾರ ವಿಚಾರ, ಸಂಪ್ರದಾಯಗಳು ವಿಶಿಷ್ಟವಾಗಿದ್ದು, ಹಿಂದೂ ಸಮಾಜದ ಬಲವರ್ಧನೆಗೆ ಅನನ್ಯ ಕೊಡುಗೆ ನೀಡಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಮಲೆಯಾಳಿ ಸಮಾಜದ ೧೫ನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಂಧವ್ಯ ಎಲ್ಲರೂ ಒಟ್ಟಾಗಿ ಒಂದೆಡೆ ಸೇರುವುದರಿಂದ ವೃದ್ಧಿಯಾಗುತ್ತದೆ. ಮಲೆಯಾಳಿ ಸಮಾಜದವರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿಗೆ ಒತ್ತು ನೀಡಬೇಕು. ಇದರಿಂದ ಸಮಾಜದ ಅಭಿವೃದ್ಧಿಯಾಗಲಿದೆ. ಯುವಪೀಳಿಗೆಗೆ ಸಮಾಜದ ಸಂಸ್ಕೃತಿ ಆಚಾರ-ವಿಚಾರ, ಸಂಪ್ರದಾಯವನ್ನು ರೂಢಿಸಿಕೊಳ್ಳಲು ಹಿರಿಯರು ತಿಳಿಹೇಳಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಅನಿವಾರ್ಯತೆಯಿದೆ. ಹಾಗೆಯೇ ಸರಕಾರ ಹಾಗೂ ಸರಕಾರಿಯೇತರ ಉದ್ಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ವಿಶೇಷ ತರಬೇತಿಯ ಅಗತ್ಯತೆ ಇದೆ. ಅದನ್ನು ಪಡೆದುಕೊಂಡು ಮಕ್ಕಳು ಏಕಾಗ್ರತೆ ಶ್ರದ್ಧೆಯಿಂದ ಪರೀಕ್ಷೆ ಬರೆದು ಉನ್ನತ ಹುದ್ದೆಗಿಟ್ಟಿಸಿಕೊಳ್ಳಬೇಕು, ಅದಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ನಮ್ಮ ದೇಶದಲ್ಲಿ ವಿವಿಧ ಜಾತಿ, ಮತ ಧರ್ಮ ಪಂಗಡದವರು ಇದ್ದರೂ ಎಲ್ಲರೂ ಅವರವರ ಸಂಸ್ಕೃತಿ ಆಚಾರ ಸಂಪ್ರದಾಯಗಳನ್ನು ಪೋಷಿಸಿ ಬೆಳೆಸುವ ಕಾರ್ಯಮಾಡಬೇಕು. ಸಂಘಟನೆಯಿAದ ಸಮಾಜದ ಅಭಿವೃದ್ಧಿಯಾಗಲಿದ್ದು, ಯುವಪೀಳಿಗೆಗೆ ಭಾಷೆ ಸಂಸ್ಕೃತಿ ಸಂಪ್ರದಾಯನ್ನು ಬೆಳೆಸಲು ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ರಂಗೋಲಿ ಬಿಡಿಸುವುದು ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಸಮಾಜ ಸೇವಕ ಡಾ. ಮಂಥರ್ಗೌಡ ಮಾತನಾಡಿ, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವುದರಿಂದ ಸಮಾಜದ ಬಲವರ್ಧನೆಯಾಗಲಿದೆ. ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡುವುದಾಗಿ ಘೋಷಿಸಿದರು.
ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎ. ಸಂತೋಷ್ ಕುಮಾರ್ ವಹಿಸಿದ್ದರು.
ಪಟ್ಟಣದಲ್ಲಿ ಮಲಯಾಳಿ ಸಮಾಜದ ಬಾಂಧವರು ಚಂಡೆ ವಾದ್ಯಗೋಷ್ಠಿ ಪಟಾಕಿಯೊಂದಿಗೆ ಮಲೆಯಾಳಿ ಉಡುಗೆಯಲ್ಲಿ ಮೆರವಣಿಗೆಯಲ್ಲಿ ತೆರಳಿದರು.
ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಹಿಂದೂ ಮಲೆಯಾಳಿ ಸಮಾಜದ ಗೌರವಾಧ್ಯಕ್ಷ ಕೆ.ಎನ್. ರಮೇಶ್, ಉದ್ಯಮಿ ಎಸ್.ಜಿ. ಶ್ರೀನಿವಾಸ್, ಹಿಂದೂ ಮಲೆಯಾಳಿ ಸಮಾಜದ ಕಾರ್ಯದರ್ಶಿ ಶಶಿಕುಮಾರ್, ಸುಂಟಿಕೊಪ್ಪ ಮಲೆಯಾಳಿ ಸಮಾಜದ ಉಪಾಧ್ಯಕ್ಷ ರಾಮಕೃಷ್ಣ, ಗೌರವಾಧ್ಯಕ್ಷ ಭಾಸ್ಕರ್, ಸ್ಥಾಪಕ ಅಧ್ಯಕ್ಷ ಹಾಗೂ ನಿಕಟಪೂರ್ವ ಅಧ್ಯಕ್ಷ ಪಿ.ಸಿ. ಮೋಹನ್, ಮಲೆಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್. ವಾಸುದೇನ್ ಮತ್ತಿತರರು ಇದ್ದರು.
ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ಪಿ.ಆರ್. ಸುನಿಲ್ ಕುಮಾರ್, ಸದಸ್ಯೆ ಶಾಂತಿ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುನೀತ್ ಅವರುಗಳನ್ನು ಸನ್ಮಾನಿಸಲಾಯಿತು.
ದಿನದ ಅಂಗವಾಗಿ ಬಾಂಧವರಿಗೆ ಪುಷ್ಪ ರಂಗೋಲಿ ಸ್ಪರ್ಧೆ, ವಿಶೇಷ ಓಣಂ ಸದ್ಯವನ್ನು ಆಯೋಜಿಸಲಾಗಿತ್ತು. ಮೊದಲಿಗೆ ಸಿ.ಬಿ. ಪ್ರಕಾಶ್ ಪ್ರಾರ್ಥಿಸಿ, ಸುಚಿತಾ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮವನ್ನು ಶಿವಮಣಿ ನಿರೂಪಿಸಿದರು.