ಮಡಿಕೇರಿ, ಅ. ೧೭: ರೈತರ ಜೀವನಾಡಿ, ದಕ್ಷಿಣದ ಜೀವನದಿ, ಪವಿತ್ರ ಕಾವೇರಿ ಮಾತೆಯ ಆಶೀರ್ವಾದ ರಾಜ್ಯದ ಜನರ ಮೇಲಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಪ್ರಾರ್ಥಿಸಿದರು.

ತಲಕಾವೇರಿಯಲ್ಲಿ ತೀರ್ಥೋದ್ಭವದ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತೀರ್ಥರೂಪಿಣಿಯಾಗಿ ತಾಯಿ ಕಾವೇರಿ ದರ್ಶನ ನೀಡಿದ್ದು, ಲಕ್ಷಾಂತರ ಜನರ ಜೀವನೋಪಾಯ, ನೆಮ್ಮದಿಯನ್ನು ಕಾಪಾಡುವ ತಾಯಿಗೆ ಪೂಜೆ ಸಲ್ಲಿಸಿರುವುದು ಈ ಕ್ಷಣದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ತಾಯಿಯನ್ನು, ಪಂಚಭೂತಗಳನ್ನು ನಂಬುವವರಿಗೆ ದೇವಿ ನೆಮ್ಮದಿ ನೀಡಲಿ. ಭಕ್ತರ ನಂಬಿಕೆ, ಉತ್ಸಾಹ ನೋಡಿ ಪುಳಕಿತನಾದೆ. ಪಾದಯಾತ್ರೆಯ ಮೂಲಕ ಭಕ್ತಿ ಮೆರೆದಿದ್ದಾರೆ. ನಂಬಿದ ಜನರಿಗೆ ಕಾವೇರಿ ತಾಯಿ ಆಶೀರ್ವಾದ ಮಾಡಲಿ ಎಂದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಮಳೆ ಇಲ್ಲದೆ ತೀರ್ಥೋದ್ಭವ ಘಟಿಸಿದೆ. ಇಡೀ ನಾಡಿಗೆ ಕಾವೇರಿ ಸುಖ, ಶಾಂತಿ ನೆಮ್ಮದಿ ನೀಡಲಿ ಎಂದು ಹೇಳಿದರು.