ಗೋಣಿಕೊಪ್ಪ ವರದಿ, ಅ. ೧೭: ಕಳಪೆ ಗುಣಮಟ್ಟದಿಂದ ಕೂಡಿದ್ದ ಹಾತೂರು ಯೋಗ ಕೇಂದ್ರ ಕಟ್ಟಡ ವನ್ನು ಕೆಡವಿ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಹೋರಾಟಕ್ಕೆ ಮಣಿದು ಕಟ್ಟಡದ ಮರು ನಿರ್ಮಾಣ ಕಾಮಗಾರಿ ೫ ದಿನಗಳಿಂದ ಆರಂಭಿಸಲಾಗಿದೆ. ಅಡಿಪಾಯ ಹೊರತುಪಡಿಸಿ ಮುಖ್ಯ ಕಂಬ, ಗೋಡೆ ಎಲ್ಲವೂ ಹೊಸದಾಗಿ ನಿರ್ಮಾಣವಾಗುತ್ತಿದೆ.
ಹಾತೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸುತ್ತಿದ್ದ ಯೋಗ ಕೇಂದ್ರ ಕಟ್ಟಡ ತೀರಾ ಕಳಪೆಯಾಗಿದ್ದು, ಕಾಮಗಾರಿಯನ್ನು ತಕ್ಷಣ ತಡೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಸುಮಾರು ೪ ಲಕ್ಷ ರೂ. ಅನುದಾನದಲ್ಲಿ ನಿರ್ಮಿಸುತ್ತಿದ್ದ ಕಟ್ಟಡ ಕಳಪೆ ಗುಣಮಟ್ಟ ಹೊಂದಿದೆ. ಗುಣಮಟ್ಟ ಪರಿಶೀಲನೆಗೆ ಕ್ರಮಕೈಗೊಳ್ಳಬೇಕೆಂದು ಸೆಪ್ಟೆಂಬರ್ ೨೨ ರಂದು ಗ್ರಾಮಸ್ಥರು ಒತ್ತಾಯಿಸಿದ್ದರು.
ಕಟ್ಟಡ ನಿರ್ಮಾಣವನ್ನು ತಡೆ ಹಿಡಿಯಬೇಕೆಂದು ಗ್ರಾಮಸ್ಥರಾದ ಕೇಳಪಂಡ ರಾಕೇಶ್ ಅಪ್ಪಯ್ಯ, ಕೊಕ್ಕಂಡ ಗಿಣಿ ಗಣಪತಿ, ಪ್ರಮುಖರಾದ ಪುಲಿಯಂಡ ರೋಶನ್ ಕಾಳಪ್ಪ, ಕೊಂಗಾAಡ ಎಸ್. ದೇವಯ್ಯ, ವಿನೇಶ್ ಒತ್ತಾಯಿಸಿದ್ದರು. ಇದೀಗ ಮರು ನಿರ್ಮಾಣ ನಡೆಯುತ್ತಿದೆ.