ವೀರಾಜಪೇಟೆ, ಅ. ೧೬: ನವೆಂಬರ್ ೧೨ ರಂದು ನಡೆಯಲಿರುವ ರಾಷ್ಟಿçÃಯ ಮೆಗಾ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯು ಹಿರಿಯ ನ್ಯಾಯಾಧೀಶ ಎಂ.ಜಿ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು ಮೆಗಾ ಲೋಕ ಅದಾಲತ್‌ನಲ್ಲಿ ಚೆಕ್‌ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಪೊಲೀಸರು ಸಮನ್ಸ್ ಹಾಗೂ ವಾರಂಟ್‌ಗಳನ್ನು ತಡಮಾಡದೆ ಸಮಯಕ್ಕೆ ಸರಿಯಾಗಿ ಜಾರಿ ಮಾಡುವಂತಾಗಬೇಕು ಎಂದರು.

ಈ ಸಂದರ್ಭ ನ್ಯಾಯಾಧೀಶ ಸಂತೋಷ್ ಕೊಠಾರಿ ಅವರು ಮಾತನಾಡಿ, ನ್ಯಾಯಾಲಯದ ಆವರಣ ಮತ್ತು ಮುಂಭಾಗದ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದರಿಂದ ಇತರ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದರು. ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರೊಂದಿಗೆ ವಾಹನಗಳ ನಿಲುಗಡೆಗೆ ಜಾಗ ನೀಡುವಂತೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಅಪರ ಹಾಗೂ ಸತ್ರ ನ್ಯಾಯಾಧೀಶರಾದ ಸುಜಾತ, ಅಪರ ಸಿವಿಲ್ ನ್ಯಾಯಾಧೀಶೆ ಮಹಾಲಕ್ಷಿö್ಮ, ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್, ಸರಕಾರಿ ಅಭಿಯೋಜಕ ಯಾಸಿನ್ ಅಹ್ಮದ್, ಸರಕಾರಿ ವಕೀಲೆ ಸಿ.ಬಿ. ಅನಿತಾ, ನಗರ ಪೊಲೀಸ್ ಠಾಣಾಧಿಕಾರಿ ಶ್ರೀಧರ್, ಶಿರಸ್ತೆದಾರ್ ಅಣ್ಣು ನಾಯಕ್, ಅರಣ್ಯ ಅಧಿಕಾರಿ ಕೆ.ಎಂ. ದೇವಯ್ಯ, ಕಾರ್ಮಿಕ ಅಧಿಕಾರಿ ಎಂ.ಸಿ. ಮಾದಪ್ಪ, ಸೆಸ್ಕಾಂ ಅಭಿಯಂತರ ರಮೇಶ್, ಅಬಕಾರಿ ಇಲಾಖೆಯ ಹೆಚ್.ಸಿ. ಚಂದ್ರ, ಕಾನೂನು ಸೇವಾ ಸಿಬ್ಬಂದಿ ಗುತ್ಯಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.