ಮಡಿಕೇರಿ, ಅ. ೧೬: ಜಿಲ್ಲೆಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಸಂಘರ್ಷ ಸೃಷ್ಟಿಸಬೇಕೆಂಬುದರ ಕುರಿತು ನಡೆದ ಮೊಬೈಲ್ ಸಂಭಾಷಣೆಯ ವೈರಲ್ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಜಾಗರಣಾ ವೇದಿಕೆ ತಾ. ೧೭ ರಂದು (ಇಂದು) ಪ್ರತಿಭಟನೆ ನಡೆಸಲಿದೆ.

ಮಡಿಕೇರಿಯ ನಗರಸಭೆಯ ಮುಂಭಾಗ ಬೆಳಿಗ್ಗೆ ೧೧.೩೦ಕ್ಕೆ ಪ್ರತಿಭಟನೆ ಹಮ್ಮಿಕೊಂಡಿರುವ ಸಂಘಟನೆಯು ಆರೋಪಿಗಳಾದ ನಗರಸಭೆ ಸದಸ್ಯ ಮುಸ್ತಾಫ ಹಾಗೂ ಬೆಟ್ಟಗೇರಿಯ ಅಬ್ದುಲ್ಲಾ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದೆ.

ಕಾನೂನು ಕ್ರಮದ ಜೊತೆಗೆ ನಗರಸಭೆ ಸದಸ್ಯನ ಸದಸ್ಯತ್ವ ರದ್ದುಗೊಳಿಸಬೇಕು, ಪ್ರಕರಣದ ಹೆಚ್ಚಿನ ತನಿಖೆಗಾಗಿ ಎನ್.ಐ.ಎ.ಗೆ ವಹಿಸಬೇಕು. ಆರೋಪಿಗಳಿಬ್ಬರನ್ನೂ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಆರೋಪಿಗಳ ಆಸ್ತಿಪಾಸ್ತಿಗಳನ್ನು ಸರಕಾರ ಮುಟ್ಟುಗೋಲು ಅಥವಾ ಕೆಡವಿ ಹಾಕಬೇಕು.

ಜಿಲ್ಲೆಯಲ್ಲಿನ ಪಿಎಫ್‌ಐ, ಎಸ್.ಡಿ.ಪಿ.ಐ. ಸೇರಿದಂತೆ ಇನ್ನಿತರ ಸಂಘಟನೆಗಳ ಪ್ರಮುಖರನ್ನು ತನಿಖೆಗೊಳಪಡಿಸಬೇಕು. ಆರೋಪಿಗಳ ಮೇಲೆ ಯು.ಎ.ಪಿ.ಎ. ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗುವುದು.