ಮಡಿಕೇರಿ, ಅ. ೧೬: ಮರಂದೋಡ ಗ್ರಾಮದಲ್ಲಿ ೩೯ನೇ ವರ್ಷದ ವಾರ್ಷಿಕ ಕ್ರೀಡೋತ್ಸವ ಪಂಚಾಯಿತಿ ವತಿಯಿಂದ ಇತ್ತೀಚೆಗೆ ನಡೆಯಿತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ೧೫೦೦ ಮೀ ಓಟ, ಗೋಣಿಚೀಲ ಓಟ, ಹಗ್ಗಜಗ್ಗಾಟ ಸೇರಿದಂತೆ ಒಟ್ಟು ೩೮ ಸ್ಪರ್ಧೆಗಳು ನಡೆದವು.
ಅತಿಥಿಯಾಗಿ ಮಾರ್ಚಂಡ ಅಯ್ಯಪ್ಪ, ಚಂಡಿರ ಲಾವಣಿ, ಅನ್ನಡಿಯಂಡ ಕಮಲ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆಯನ್ನು ಚೋಯಮಾಡಂಡ ಹರೀಶ್ ಮೊಣ್ಣಪ್ಪ ವಹಿಸಿದ್ದರು.
ಪಂಚಾಯಿತಿ ಸದಸ್ಯೆ ಲೀಲಾವತಿ, ಎಸ್ಡಿಎಂಸಿ ಅಧ್ಯಕ್ಷ ಪೂವಣ್ಣ ಹಾಜರಿದ್ದರು. ಸಂಜೆ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲೋಕೋಪಯೋಗಿ ಇಲಾಖೆಯ ಪೃಥ್ವಿ, ಕಲಿಯಾಟಂಡ ಗಿರೀಶ್ ಸುಬ್ಬಯ್ಯ ಪಾಲ್ಗೊಂಡಿದ್ದರು.
ಗಾಯಕ ದಯಾ ಚಿಣ್ಣಪ್ಪ, ಪಾಲೆಯಂಡ ಕಾವ್ಯ ದೇವಯ್ಯ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.