ಸೋಮವಾರಪೇಟೆ, ಅ. ೧೬: ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ಒ.ಪಿ.ಎಸ್. ಸಂಕಲ್ಪ ಯಾತ್ರೆ ಮತ್ತು ಧ್ವಜ ಹಸ್ತಾಂತರ ಕಾರ್ಯಕ್ರಮ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯಿತು.

ಪಟ್ಟಣದ ಕಕ್ಕೆಹೊಳೆ ಜಂಕ್ಷನ್ ಬಳಿಯಿಂದ ದ್ವಿಚಕ್ರ ವಾಹನಗಳ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಸಿ, ಎನ್.ಪಿ.ಎಸ್ ಯೋಜನೆಯ ವಿರುದ್ಧ ಘೋಷಣೆ ಕೂಗಿದರು.

ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಮಾತನಾಡಿ, ನಿಶ್ಚಿತ ಪಿಂಚಣಿ ಎಂಬುದು ಕೇವಲ ಆರ್ಥಿಕ ಸೌಲಭ್ಯವಲ್ಲ. ಪ್ರಾಮಾಣಿಕ ಸರಕಾರಿ ನೌಕರನ ಗೌರವದ ಪ್ರತೀಕ. ನಮ್ಮ ಕುಟುಂಬದ ಭದ್ರತೆಗಾಗಿ ಸರಕಾರಿ ನೌಕರನ ಅಸ್ಮಿತೆಯ ಉಳಿವಿಗಾಗಿ ಹೋರಾಡಬೇಕು. ಡಿಸೆಂಬರ್ ೧೯ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಮಾಡು ಇಲ್ಲವೇ ಮಡಿ ಅನಿರ್ದಿಷ್ಟ ಹೋರಾಟದಲ್ಲಿ ಎಲ್ಲಾ ಎನ್.ಪಿ.ಎಸ್ ನೌಕರರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ತಾಲೂಕು ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, ಪಿಂಚಣಿ ಬೇಡಿಕೆ ನಮ್ಮ ಹಕ್ಕು. ಎನ್.ಪಿ.ಎಸ್ ಜಾರಿಯಾಗಿ ೧೬ ವರ್ಷಗಳು ಕಳೆದರೂ ಇನ್ನೂ ಸಮಸ್ಯೆ ಇತ್ಯರ್ಥವಾಗಿಲ್ಲ. ಹೋರಾಟ ಅನಿವಾರ್ಯ; ಎಲ್ಲರೂ ಕೈ ಜೋಡಿಸಬೇಕೆಂದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಅಧ್ಯಕ್ಷ ಧರ್ಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಕಂದಾಯ ಇಲಾಖೆಯ ಗೋಪಿನಾಥ್ ಮತ್ತಿತರರು ಮಾತನಾಡಿದರು.

ಇದೇ ಸಂದರ್ಭ ಹೋರಾಟದ ಧ್ವಜವನ್ನು ಹಸ್ತಾಂತರಿಸಲಾಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಾಲಾ ನೌಕರರ ಸಂಘ, ಕಂದಾಯ ಇಲಾಖೆ, ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ, ಲಿಪಿಕ ನೌಕರರ ಸಂಘ ಮತ್ತಿತರ ಸಂಘಗಳು ಬೆಂಬಲ ಸೂಚಿಸಿದ್ದವು.