ಕನ್ನಡ ನಾಡಿನ ಜೀವನದಿ, ಅನ್ನವ ನೀಡುವ ದಿವ್ಯನದಿ, ದಕ್ಷಿಣದ ಗಂಗೆ ಎಂದು ಕರೆಸಿಕೊಂಡಿರುವ ಪವಿತ್ರ ನದಿ ಕೊಡಗಿನ ಕಾವೇರಿ.

ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದ ಜನತೆಗ ನೀರುಣಿಸುವ ಅನ್ನದಾತೆ ಕೊಡಗಿನ ಕಾವೇರಿ. ಇಂತಹ ಕಾವೇರಿ ಉದ್ಭವವಾಗುವುದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ. ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಪ್ರಶಾಂತ ವಾತಾವರಣದ ಪವಿತ್ರ ತೀರ್ಥಕುಂಡಿಕೆಯಲ್ಲಿ ತೀರ್ಥರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಕೊಡಗಿನ ಮಡಿಕೇರಿಯಿಂದ ೪೮ ಕಿ.ಮೀ. ದೂರದಲ್ಲಿ ಹಾಗೂ ಭಾಗಮಂಡಲ ತ್ರಿವೇಣಿ ಸಂಗಮದಿAದ ೮ ಕಿ.ಮೀ. ದೂರದಲ್ಲಿ ತಲಕಾವೇರಿಯಿದೆ. ಕಾವೇರಿ ಕೊಡಗಿನ ಜನತೆಯ ಆರಾಧ್ಯ ದೈವ ಅದರಲ್ಲೂ ಕೊಡವರ ಕುಲದೇವತೆ ಎಂದು ಪ್ರಸಿದ್ಧಿ ಪಡೆದಿದ್ದಾಳೆ. ಕೊಡಗಿನ ಜನತೆ ಕಾವೇರಿ ನೀರನ್ನು ಹೆಚ್ಚಾಗಿ ಬಳಸುವುದಿಲ್ಲವಾದರಿಂದ ರಾಜ್ಯ ಹಾಗೂ ಹೊರರಾಜ್ಯದ ಕೋಟ್ಯಂತರ ಜನತೆಗೆ ಕಾವೇರಿ ಅನ್ನದಾತೆಯಾಗಿದ್ದಾಳೆ. ಆದ್ದರಿಂದ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಹೆಚ್ಚಿನ ಭಕ್ತಾದಿಗಳು ತಲಕಾವೇರಿಗೆ ಆಗಮಿಸುತ್ತಾರೆ.

ಸಮುದ್ರಮಟ್ಟದಿಂದ ೩,೭೦೦ ಮೀಟರ್ ಎತ್ತರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲು ಕಾವೇರಿ ಉಗಮಸ್ಥಾನ. ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ಮುಂದೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ನಂತರ ಭಾಗಮಂಡಲದಲ್ಲಿ ಕನ್ನಿಕೆ-ಸುಜ್ಯೋತಿ ನದಿಯನ್ನು ಸೇರಿ ಮುಂದೆ ಸಾಗುತ್ತಾಳೆ. ಇದೇ ಭಾಗಮಂಡಲದ ತ್ರಿವೇಣಿ ಸಂಗಮ. ಕರ್ನಾಟಕ ರಾಜ್ಯದಲ್ಲಿ ೪೦೦ ಕಿ.ಮೀ. ದೂರ ಹರಿಯುವ ಕಾವೇರಿ ಸುಮಾರು ೭೮೫ ಕಿ.ಮೀ. ದೂರ ಹರಿದು ಮುಂದೆ ಪೂಂಪುಹಾರ್ ಎಂಬಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ.

ಐತಿಹ್ಯ: ಕಾವೇರಿ ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಬಗ್ಗೆ ಒಂದು ಇತಿಹಾಸವಿದೆ. ಅಗಸ್ತö್ಯಮುನಿಗಳು ಬ್ರಹ್ಮಗಿರಿ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದ ಸಂದರ್ಭ ಅಲ್ಲಿಗೆ ಕವೇರನೆಂಬ ಬ್ರಾಹ್ಮಣ ಬರುತ್ತಾನೆ. ಮಕ್ಕಳಿಲ್ಲದ ಕವೇರನಿಗೆ ಬ್ರಹ್ಮದೇವನು ತನ್ನ ಮಗಳು ಲೋಪಾಮುದ್ರೆಯನ್ನು ದತ್ತುಮಗಳಾಗಿ ನೀಡುತ್ತಾನೆ. ಕವೇರನ ಮಗಳಾದ ಲೋಪಾಮುದ್ರೆ ಕಾವೇರಿಯಾಗುತ್ತಾಳೆ. ಕಾವೇರಿ ಸೌಂದರ್ಯವತಿಯಾಗಿ ಬೆಳೆದಿರುವ ಸಂದರ್ಭ ಅಗಸ್ತö್ಯಮುನಿಗಳು ಕಾವೇರಿಯನ್ನು ಮದುವೆಯಾಗಲು ಬಯಸುತ್ತಾರೆ. ಆರಂಭದಲ್ಲಿ ಕಾವೇರಿ ಇದಕ್ಕೆ ಒಪ್ಪದೇ ಇದ್ದರೂ ಯಾವುದೇ ಕಾರಣಕ್ಕೂ ಒಂದು ಕ್ಷಣವೂ ನನ್ನನ್ನು ಬಿಟ್ಟು ಎಲ್ಲಿಗೂ ಹೋಗಬಾರದೆಂದು ಕಟ್ಟಪ್ಪಣೆ ವಿಧಿಸಿ, ವಿವಾಹಕ್ಕೆ ಒಪ್ಪಿಗೆ ನೀಡುತ್ತಾಳೆ. ಒಪ್ಪಂದದAತೆ ಮದುವೆಯೂ ನಡೆಯುತ್ತದೆ. ಒಂದು ದಿನ ಅಗಸ್ತö್ಯಮುನಿ ಕಾವೇರಿಯನ್ನು ತನ್ನ ಕಮಂಡಲುವಿನೊಳಗೆ ಅವಹಾನೆ ಮಾಡಿ ತನ್ನ ಶಿಷ್ಯರಿಗೆ ನೋಡಿಕೊಳ್ಳಲು ಹೇಳಿ ಬ್ರಹ್ಮಗಿರಿ ಬೆಟ್ಟದ ಉತ್ತರಭಾಗದಲ್ಲಿರುವ ಕನ್ನಿಕಾ ನದಿಗೆ ಸ್ನಾನಕ್ಕೆಂದು ತೆರಳುತ್ತಾನೆ. ಅಗಸ್ತö್ಯಮುನಿ ಮಾತಿಗೆ ತಪ್ಪಿ ಕಾವೇರಿಯನ್ನು ಬಿಟ್ಟು ಹೋದ್ದರಿಂದ ಲೋಕೋದ್ದಾರಿಣಿಯಾಗಿ ಹರಿಯಲು ನಿರ್ಧರಿಸಿದ ಕಾವೇರಿ ಕಮಂಡಲುವಿನಿAದ ಹೊರಬಂದು ಬ್ರಹ್ಮಕುಂಡಿಕೆಯನ್ನು ಸೇರಿ ಮುಂದೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ.

ನದಿಯಾಗಿ ಹರಿಯುವ ಕಾವೇರಿ ಮುಂದೆ ಕಾಣಿಸುವುದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ. ಕಮಂಡಲುವಿನಿAದ ಹೊರಬಂದು ಬ್ರಹ್ಮಕುಂಡಿಕೆಗೆ ಸೇರಿದ ಆ ಶುಭ ಮೂಹೂರ್ತದಲ್ಲಿ ಕಾವೇರಿ ಪ್ರತೀ ವರ್ಷ ಭಕ್ತಾದಿಗಳಿಗೆ ತನ್ನ ದರ್ಶನ ನೀಡುತ್ತಾಳೆ. ತಲಕಾವೇರಿಯಿಂದ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ಭಾಗಮಂಡದಲ್ಲಿ ಕನ್ನಿಕೆ-ಸುಜ್ಯೋತಿ ನದಿಯನ್ನು ಸೇರಿ ಮುಂದೆ ಹರಿಯುತ್ತಾಳೆ. ಭಾಗಮಂಡಲದಲ್ಲಿ ಅಗಸ್ತö್ಯಮುನಿ ಕಾವೇರಿಯನ್ನು ತಡೆಯುತ್ತಾರೆ. ಆದರೆ ನಾನು ಲೋಕೋದ್ದಾರಿಣಿಯಾಗಿ ಹರಿಯುವುದಾಗಿ ಹೇಳುವ ಕಾವೇರಿ ಮುಂದೆ ಸಾಗುತ್ತಾಳೆ. ಅಲ್ಲದೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವವರ ಪಾಪ ಪರಿಹಾರವಾಗುತ್ತದೆ ಎಂಬ ಮಾತನ್ನು ಹೇಳುತ್ತಾಳೆ. ಅದರಂತೆ ಇಂದಿಗೂ ಭಕ್ತಾದಿಗಳು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ತಲಕಾವೇರಿಗೆ ತೆರಳುತ್ತಾರೆ.

ಕೊಡಗಿನ ಮೂಲನಿವಾಸಿಗಳು ಮೃತಪಟ್ಟ ತಮ್ಮ ಹಿರಿಯರಿಗೆ ಭಾಗಮಂಡಲದಲ್ಲಿ ತಲೆಮುಡಿಕೊಟ್ಟು, ಪಿಂಡ ಪ್ರದಾನ ಮಾಡಿ ನಂತರ ತಲಕಾವೇರಿಗೆ ತೆರಳುವುದು ಸಂಪ್ರದಾಯವಿದೆ.

ಭಕ್ತಿಭಾವದ ಸಂಕೇತ

ಕೊಡಗಿನ ಜನತೆಗೆ ಕಾವೇರಿ ಸಂಕ್ರಮಣ ಎಂದರೆ ಭಕ್ತಿಭಾವದ ಸಂಕೇತ. ಅಂದು ಭಾಗಮಂಡಲ-ತಲಕಾವೇರಿಗೆ ತೆರಳಿ ಭಕ್ತಿಭಾವದಿಂದ ಸ್ನಾನ ಮಾಡಿ ತೀರ್ಥವನ್ನು ಸ್ವೀಕರಿಸುತ್ತಾರೆ. ದೂರದೂರಿನಲ್ಲಿರುವವರು ಮನೆಗೆ ಹಿಂದಿರುಗಿ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ಮಾತೆಯ ದರುಶನ ಪಡೆಯುತ್ತಾರೆ. ಒಟ್ಟಾರೆ ಮಾತೆ ಕಾವೇರಿ ಕರುನಾಡಿನ ಜನರ ಬದುಕಾಗಿದ್ದು, ಜಿಲ್ಲೆಯ ಮಹಾನ್ ಶಕ್ತಿಯಾಗಿದ್ದಾಳೆ.

ಪ್ರವಾಸೋದ್ಯಮವಾಗದಿರಲಿ

ಪ್ರವಾಸೋದ್ಯಮ ಹೆಚ್ಚಾದಂತೆ ಹೊರ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಇದನ್ನು ಪ್ರವಾಸಿತಾಣ ಎಂಬAತೆ ಬಿಂಬಿಸಲಾಗುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಅಸಮಾಧಾನವಿದೆ. ಹೀಗಾಗಿ ಹಲವು ಕಾಲದಿಂದಲೇ ತಲಕಾವೇರಿ-ಭಾಗಮಂಡಲವನ್ನು ಪ್ರವಾಸಿತಾಣಗಳ ಪಟ್ಟಿಯಿಂದ ಕೈ ಬೀಡುವಂತೆ ಜಿಲ್ಲೆಯ ಜನತೆ ಸರಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ತಲಕಾವೇರಿ-ಭಾಗಮಂಡಲ ಪ್ರವಾಸಿತಾಣವಲ್ಲ- ಧಾರ್ಮಿಕ ಸ್ಥಳ. ದೇವಾಲಯಕ್ಕೆ ಭೇಟಿ ನೀಡುವಾಗ ಮೈ-ಮನಸ್ಸು ಶುದ್ಧವಾಗಿರಲಿ. ಧಾರ್ಮಿಕ ವಸ್ತçಗಳಿಗೆ ಆದ್ಯತೆ ನೀಡಿ. ಸ್ಥಳೀಯ ಆಚರಣೆ ಸಂಪ್ರದಾಯಗಳಿಗೆ ಗೌರವ ನೀಡಬೇಕು. ಸ್ಥಳೀಯ ಭಕ್ತಾದಿಗಳ ಭಾವನೆಗೆ ಗೌರವ ನೀಡಬೇಕು.

- ಪೇರಿಯಂಡ ಜಯಂತಿ ಉತ್ತಪ್ಪ, ಮಡಿಕೇರಿ.

ಮೊ. ೯೭೪೧೧೬೮೧೦೭