ಕೂಡಿಗೆ, ಅ. ೧೬: ರಾಜ್ಯದ ಪ್ರಥಮ ಯೋಜನೆಯಾಗಿರುವ ಕೂಡಿಗೆಯ ಮೇಕೆ ಹಾಲು ಘಟಕ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಈ ಘಟಕವನ್ನು ಪಶುಸಂಗೋಪನಾ ಇಲಾಖೆಯ ಅಧೀನದಿಂದ ರಾಜ್ಯ ಕುರಿ ನಿಗಮ ಮಂಡಳಿಗೆ ವಹಿಸುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಕುರಿತಾದ ಪ್ರಕ್ರಿಯೆ ಈಗಾಗಲೇ ರಾಜ್ಯಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರಸ್ತುತ ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿ ಈ ಮೇಕೆ ಹಾಲು ಘಟಕವಿದೆ. ಆದರೆ ಕಳೆದ ಏಳು ವರ್ಷಗಳಿಂದಲೂ ಉದ್ದೇಶಿತ ಯಾವುದೇ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣದೆ ಬಹುತೇಕ ಇದು ನೆನೆಗುದಿಗೆ ಬಿದ್ದಂತಿದೆ. ಇದಕ್ಕಾಗಿ ರೂ. ೧.೮೮ ಕೋಟಿಯ ಯೋಜನೆಯೊಂದು ಈ ಹಿಂದೆ ರೂಪಿತವಾಗಿತ್ತಾದರೂ ಯಾವುದೇ ಪ್ರಗತಿಯಾಗಿಲ್ಲ. ಇದರಿಂದಾಗಿ ಈ ಘಟಕ ಪ್ರಸ್ತುತ ನಿರರ್ಥಕವೆಂಬAತಿದ್ದು, ಇದೀಗ ಪಶುಸಂಗೋಪನಾ ಇಲಾಖೆಯ ಅಧೀನದ ಬದಲಾಗಿ ರಾಜ್ಯ ಕುರಿ ನಿಗಮ ಮಂಡಳಿಗೆ ವಹಿಸುವ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ೧೧೨ ಎಕರೆಗಳಷ್ಟು ಪ್ರದೇಶದಲ್ಲಿ ಈ ಹಿಂದೆ ಪಶು ಸಂಗೋಪನಾ ಸಚಿವರಾಗಿದ್ದ ಎ. ಮಂಜು ಅವರ ಅಧಿಕಾರಾವಧಿಯಲ್ಲಿ ಭೂಮಿ ಪೂಜೆಯೊಂದಿಗೆ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿತ್ತು.

ಮೇಕೆ ಹಾಲು ಉತ್ಪಾದನಾ ಘಟಕದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಮೂಲಕ ೧.೮೮ ಕೋಟಿ ವೆಚ್ಚದಲ್ಲಿ ನಡೆಸಬೇಕಿತ್ತು. ಈಗಾಗಲೇ ಕಟ್ಟಡ ಮತ್ತು ಮೇಕೆಗಳ ಸಾಕಾಣಿಕೆಗೆ ಬೇಕಾಗುವ ಗ್ಯಾಲರಿ ಮತ್ತು ಅವುಗಳ ಕಸ ಸಂಗ್ರಹ ಕಟ್ಟಡಗಳ ಕಾಮಗಾರಿಯು ನಡೆದಿದೆ. ಆದರೆ ಮುಂದಿನ ಹಂತದ ಯೋಜನೆಯ ರೂಪರೇಷೆಗಳು ಮಾತ್ರ ನಡೆಯದೆ ಕಟ್ಟಡ ಮೂಲೆಗುಂಪಾಗಿ ಉಳಿದಿದೆ.

ಕರ್ನಾಟಕ ಸರ್ಕಾರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ೧.೧೨ ಎಕರೆಗಳಷ್ಟು ಪ್ರದೇಶದಲ್ಲಿ ಮೇಕೆ ಹಾಲು ಉತ್ಪಾದನಾ ಮತ್ತು ಘಟಕದ ಕಾಮಗಾರಿಯು ಸಂಪೂರ್ಣವಾಗಿ ಮುಗಿದಿದೆ. ಆದರೆ ಜೊತೆಗೆ ಘಟಕಕ್ಕೆ ಬೇಕಾಗುವ ಯಂತ್ರೋಪಕರಣ, ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥಿಲೀಕರಣ ಕೇಂದ್ರ ಹಾಗೂ ಮೇಕೆಗೆ ಹುಲ್ಲು ಸಂಗ್ರಹಣಾ ಘಟಕ, ಮೇಕೆ ಸಾಕಾಣಿಕೆ ಕಾರ್ಯವು ಪಶುಪಾಲನಾ ಇಲಾಖೆಯ ವತಿಯಿಂದ ಆಗಬೇಕಿದೆ. ಆದರೆ ಇದುವರೆಗೂ ರಾಜ್ಯ ಮಟ್ಟದ ಇಲಾಖೆಯ ವತಿಯಿಂದ ಯಾವುದೇ ರೀತಿಯ ಯೋಜನೆಗಳು ರೂಪುಗೊಳ್ಳದೆ ಇದು ಬಹುತೇಕ ಸ್ಥಗಿತಗೊಂಡ ಮಾದರಿಯಲ್ಲಿ ಮೂಲೆಗುಂಪಾಗಿದೆ.

ರಾಜ್ಯ ಸರ್ಕಾರದ ಈ ಯೋಜನೆಯು ರೂ. ೫ ಕೋಟಿ ವೆಚ್ಚದ್ದಾಗಿದ್ದು, ಕಾಮಗಾರಿಗೆ ಪಶು ಸಂಗೋಪನಾ ಇಲಾಖೆಯ ವತಿಯಿಂದ ರೂ. ೩ ಕೋಟಿ ಬಿಡುಗಡೆಯಾಗಿದೆ.

ಮೇಕೆ ಹಾಲು ಉತ್ಪಾದನೆಯನ್ನು ರಾಜ್ಯದ ಬೀದರ್, ಮಂಗಳೂರು, ಕಡೆಗಳಲ್ಲಿ ಖಾಸಗಿಯವರು ನಡೆಸುತ್ತಿದ್ದು, ಪ್ರಗತಿಯಲ್ಲಿ ಮುನ್ನಡೆದಿದೆ. ಆ ಭಾಗದ ಜನರಿಗೆ ಇದರಿಂದ ಪ್ರಯೋಜನವಾಗುತ್ತಿದೆ. ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿ ಜಿಲ್ಲೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಘಟಕವನ್ನು ತರೆಯಲು ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಸಣ್ಣ ಪ್ರಮಾಣದ ಕಟ್ಟಡ ಮಾತ್ರ ಆಗಿದ್ದು, ಯೋಜನೆಯು ಸಂಪೂರ್ಣವಾಗಿ ನಿಂತುಹೋಗಿದೆ.

ಮುAದಿನ ಯೋಜನೆಗಳಾದ ಮೇಕೆಗಳಿಗೆ ಆಧುನಿಕ ರೀತಿಯ ಪಂಜರ ಹಾಗೂ ಹುಲ್ಲುಗಾವಲು, ಈಗಾಗಲೇ ಗುರುತಿಸಲಾಗಿರುವ ಪ್ರದೇಶದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಸ್ಥಳೀಯ ಜನರು ಆ ತಂತಿ ಬೇಲಿಯನ್ನು ತುಂಡು ಮಾಡಿ ತಮ್ಮ ಹಸುಗಳನ್ನು ಮೇಯಲು ಬಿಡುತ್ತಿದ್ದಾರೆ. ಇಲಾಖೆಯ ಯೋಜನೆಗಳು ಸಮರ್ಪಕವಾದ ರೀತಿಯಲ್ಲಿ ನಡೆಯದೆ ಇದೀಗ ಮೂಲೆ ಗುಂಪಾಗಿದೆ .

ಈ ಕೇಂದ್ರದ ಜವಾಬ್ದಾರಿಯನ್ನು ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದವು ವಹಿಸಿಕೊಂಡಿದೆ. ಆದರೆ ಇದುವರೆಗೂ ರಾಜ್ಯ ಮಟ್ಟದಲ್ಲಿ ಪ್ರಗತಿ ಪೂರಕವಾದ ಯಾವುದೇ ರೀತಿಯ ಪ್ರಕ್ರಿಯೆಗಳು ನಡೆಯದೆ ರೈತರಿಗೆ ಇದು ಕೈಗೆಟುಕದ ಮೇಕೆ ಹಾಲು ಘಟಕವಾಗಿದೆ.

ಇದೀಗ ಪಶು ಸಂಗೋಪನೆ ಇಲಾಖೆ ವತಿಯಿಂದ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕುರಿ ನಿಗಮದ ಮಂಡಳಿಗೆ ವಹಿಸುವ ಪ್ರಕ್ರಿಯೆಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಮಂಡಳಿಯವರು ಸಂಪೂರ್ಣವಾಗಿ ವಹಿಸಿಕೊಂಡು ಯೋಜನೆ ಕಾರ್ಯಗತ ಮಾಡುವವರೇ ಎಂದು ಕಾದು ನೋಡಬೇಕಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ