ಸಿದ್ದಾಪುರ, ಅ. ೧೬: ನೆರೆ ಸಂತ್ರಸ್ತರಿಗೆ ಗುರುತಿಸಿದ ಪುನರ್ವಸತಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು.
೨೦೧೯ ರಲ್ಲಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬೆಟ್ಟದಕಾಡು ಹಾಗೂ ಕುಂಬಾರಗುAಡಿ ಭಾಗದಲ್ಲಿ ನೂರಾರು ಮನೆಗಳು ನೆಲಸಮಗೊಂಡಿತ್ತು. ಮನೆ ಕಳೆದುಕೊಂಡ ಸಂತ್ರಸ್ತರು ಪುನರ್ವಸತಿ ಕಲ್ಪಿಸಿಕೊಡುವಂತೆ ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅರೆಕಾಡು ಗ್ರಾಮದಲ್ಲಿ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಒಳಪಡುವ ಅಭ್ಯತ್ಮಂಗಲ ಗ್ರಾಮದಲ್ಲಿ ಸುಮಾರು ೮ ಎಕರೆ ಜಾಗವನ್ನು ಒತ್ತುವರಿದಾರರಿಂದ ವಶಪಡಿಸಿಕೊಂಡು ಸರ್ಕಾರಿ ಭೂಮಿಯಲ್ಲಿ ಪುನರ್ವಸತಿಗೆ ಜಾಗ ಗುರುತಿಸಲಾಗಿತ್ತು.
ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಸಂತ್ರಸ್ತರಿಗೆ ಟೋಕನ್ಗಳನ್ನು ಈ ಹಿಂದೆ ವಿತರಿಸಲಾಗಿತ್ತು. ಆದರೆ ಪುನರ್ವಸತಿಗೆ ಸೇರಿದ ಜಾಗದಲ್ಲಿ ಯಾವುದೇ ಕಾಮಗಾರಿಗಳು ನಡೆಯದೇ ಕಾಡು ಪಾಲಾಗಿತ್ತು. ಈ ಬಗ್ಗೆ ‘ಶಕ್ತಿ’ ಸವಿಸ್ತಾರ ವಾದ ವರದಿಯನ್ನು ಆಗಿಂದಾಗ್ಗೆ ಪ್ರಕಟಿಸಿತ್ತು. ಇದೀಗ ಪುನರ್ವಸತಿಯ ಮನೆ ನಿರ್ಮಾಣಕ್ಕೆ ಶಾಸಕ ರಂಜನ್ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಈಗಾಗಲೇ ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ಮನೆಯೊಂದಿಗೆ ಕಿರುಸೇತುವೆ ನಿರ್ಮಾಣ ಮಾಡಲು ೩೭ ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಪಿಡಿಓ ಲೋಕೇಶ್, ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.