ನಾಪೋಕ್ಲು, ಅ. ೧೬: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಶಿಬಿರ ಉದ್ಟಾಟನೆ ಮಾಡಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಮೂಲ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಚಿನ್ ಕಾಮತ್ ಅವರು ಮಾತನಾಡಿ, ಈ ಶಿಬಿರದಿಂದ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನವಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಹಾಗೂ ನಾಯಕತ್ವ ಗುಣವನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಇದೆ. ಆದ್ದರಿಂದ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿ ಎಂದು ತಿಳಿಸಿದರು. ಮುಂಬೈನ ‘ಒಖ PಂI’ ಫೌಂಡೇಶನ್ ತರಬೇತುದಾರ ಸಚಿನ್ ಕಾಮತ್ ಹಾಗೂ ರಾಜೀವ್ ಕುಮಾರ್ ಅವರು ಆಗಮಿಸಿ ಎರಡು ದಿನಗಳ ಕಾಲ ಶಿಬಿರವನ್ನು ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಮಾತನಾಡಿ, ಶಿಬಿರದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣನವರು ಶುಭ ಕೋರಿದರು. ಕಾಲೇಜಿನ ಆಂತರಿಕ ಮೌಲ್ಯಮಾಪನ ಸಂಯೋಜಕಿ ವಿಲ್ಮ ಸ್ವಾಗತಿಸಿದರೆ, ಉಪನ್ಯಾಸಕಿ ನಮ್ರತಾ ವಂದಿಸಿ, ಉಪನ್ಯಾಸಕಿ ಭವಾನಿ ನಿರೂಪಿಸಿದರು.