ನಮಗೆ ಆಹಾರವನ್ನು ಸೇವಿಸುವ ಹಕ್ಕಿದೆ. ಆದರೆ ಬಿಸಾಡುವ ಹಕ್ಕಿಲ್ಲ’ ಈ ಹೇಳಿಕೆಯನ್ನು ನಾವು ಸಾಕಷ್ಟು ಸಲ ಕೇಳಿದ್ದೇವೆ ಮತ್ತು ಬಳಸಿರಲೂಬಹುದು. ಅಷ್ಟು ಮಾತ್ರವಲ್ಲ ಸಾಕಷ್ಟು ಹೊಟೇಲ್ಗಳಲ್ಲಿ, ಮದುವೆ ಮತ್ತಿತರ ಸಮಾರಂಭಗಳು ನಡೆಯುವ ಸಂದರ್ಭಗಳಲ್ಲಿ, ಈ ವಾಕ್ಯವನ್ನು ಮುದ್ರಿಸಿ, ಆಹಾರ ಬಡಿಸುವ ಟೇಬಲ್ಗಳ ಮುಂದೆ ನೇತುಹಾಕಿದ್ದನ್ನೂ ನೋಡಿದ್ದೇವೆ. ಇರಲಿ...
ಇಂದು ವಿಶ್ವ ಆಹಾರ ದಿನವನ್ನು ಮತ್ತೆ ಆಚರಿಸುತ್ತಿದ್ದೇವೆ. ಪ್ರತೀ ವರ್ಷ ಅಕ್ಟೋಬರ್ ಹದಿನಾರರಂದು ಸಂಯುಕ್ತ ರಾಷ್ಟçಗಳ ಆಹಾರ ಮತ್ತು ಕೃಷಿ ಸಂಘಟನೆ ರೂಪುಗೊಂಡ ನೆನಪಿಗಾಗಿ ವಿಶ್ವ ಆಹಾರದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ‘ಟeಚಿve ಟಿo oಟಿe behiಟಿಜ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಹೆಚ್ಚಾಗುತ್ತಿರುವ ವಿಶ್ವದ ಜನ ಸಮುದಾಯಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಒದಗಿಸುವುದು ಇಂದಿಗೂ ದೊಡ್ಡ ಸವಾಲಾಗಿ ಉಳಿದುಕೊಂಡಿದೆ. ಪ್ರಪಂಚದ ಹಿಂದುಳಿದ ಕೆಲವು ದೇಶಗಳಲ್ಲಿ ಆಹಾರದ ಲಭ್ಯತೆಯೇ ಐಷಾರಾಮಿ ಎಂಬ ದಯನೀಯ ಪರಿಸ್ಥಿತಿಯೂ ಇದೆ. ಅಪೌಷ್ಟಿಕತೆಯ ಸಮಸ್ಯೆಯೂ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ದಯನೀಯವಾಗಿಸಿದೆ ಎಂಬುದು ದುರಂತ.
ಜಾಗತಿಕ ಹವಾಮಾನ ವೈಪರಿತ್ಯಗಳಿಂದಾಗಿ ಉತ್ಪಾದನಾ ಮಟ್ಟದಲ್ಲೇ ಬೆಳೆ ಹಾಳಾಗುವುದು, ಸಾಗಾಣಿಕೆಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಉತ್ಪಾದಿತ ಆಹಾರ ಧಾನ್ಯಗಳು ಹಾಳಾಗುವುದು, ಆಹಾರ ಧಾನ್ಯಗಳ ಬದಲಾಗಿ ವಾಣಿಜ್ಯ ಬೆಳೆಗಳತ್ತ ವಾಲುವುದು, ನಗರಗಳು ವಿಸ್ತಾರವಾಗುತ್ತಾ ಹೋದಾಗ, ಉಂಟಾಗುವ ತ್ಯಾಜ್ಯವನ್ನು ಸುರಿಯಲು ಕೃಷಿ ಭೂಮಿಯನ್ನು ಬಳಸುವುದು ಹೀಗೆ ಪೂರೈಕೆಯ ದೃಷ್ಟಿಕೋನದಿಂದ ನೋಡಿದಾಗ ಹತ್ತು ಹಲವು ಕಾರಣಗಳಿಂದ ಆಹಾರ ಉತ್ಪಾದನೆಯ ಮೇಲೆ ಪರಿಣಾಮಗಳುಂಟಾಗುತ್ತವೆ.
ಕೃಷಿ ಕ್ಷೇತ್ರದಲ್ಲಿ ಎಷ್ಟೇ ಕ್ರಾಂತಿಕಾರಿ ಬದಲಾವಣೆಗಳು ಬೆಳವಣಿಗಳು ನಡೆದಿದ್ದರೂ ನೆಲಕ್ಕೆ ಹಾಕಿದ ಬೀಜ ಮೊಳಕೆಯೊಡೆದು, ಬೆಳೆದು ಫಸಲಾಗಿ ಆಹಾರದ ಬಟ್ಟಲಿಗೆ ಬರಲು ಒಂದಷ್ಟು ಸಮಯ ಬೇಕು. ಹಾಗಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ವಿವೇಚನಾಯುಕ್ತವಾಗಿ ಬಳಸುವುದು ಅತ್ಯಂತ ಮುಖ್ಯ. ಯಾವುದೇ ಸಭೆ ಸಮಾರಂಭಗಳಲ್ಲಿ ಆಹಾರ ವ್ಯರ್ಥವಾಗಿ ವ್ಯಯವಾಗುವುದನ್ನು ತಪ್ಪಿಸಲೇಬೇಕು.
ಭಾರತದಲ್ಲಿ ಸಣ್ಣ ಸಣ್ಣ ಹಿಡುವಳಿಗಳೇ ಜಾಸ್ತಿ. ಈ ಸಣ್ಣ ಹಿಡುವಳಿಗಳಲ್ಲಿ ಯಂತ್ರೋಪಕರಣಗಳನ್ನು ಬಳಸುವುದು ಕಷ್ಟ ಸಾಧ್ಯ. ಹಾಗೆಯೇ ಅಂಚು ಅಥವಾ ಬದುಗಳ ರೂಪದಲ್ಲಿ ಒಂದಷ್ಟು ಭೂಮಿ ಕೃಷಿಗೊಳಪಡುವುದಿಲ್ಲ. ಆದ್ದರಿಂದ ಕೃಷಿಯಡಿಯಲ್ಲಿ ಸಣ್ಣ ಸಣ್ಣ ಹಿಡುವಳಿಗಳನ್ನು ಒಗ್ಗೂಡಿಸಿ ಬೃಹತ್ ಕ್ಷೇತ್ರವನ್ನು ಕೃಷಿಗೊಳಪಡಿಸಿದಾಗ ಹೆಚ್ಚಿನ ಉತ್ಪಾದನೆ ಸಾಧ್ಯ.
ಸಮರ್ಪಕ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಟ್ಟರೆ ವರ್ಷಕ್ಕೆ ಒಂದೇ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಬಹುದು. ಬೆಳೆದ ಫಸಲನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರಾಣಗಳ ವ್ಯವಸ್ಥೆಯೂ ಆಗಬೇಕಾಗಿದೆ. ಕೃಷಿ ಪ್ರದೇಶದಿಂದ ಹತ್ತು ಹದಿನೈದು ಕಿಲೋಮೀಟರ್ ಒಳಗೆ ಉಗ್ರಾಣದ ವ್ಯವಸ್ಥೆ ದೊರೆಯುವಂತಾಗಬೇಕು. ಇಲ್ಲವಾದಲ್ಲಿ ಕೈಗೆ ಬರುವ ಹಣ, ವಾಹನದ ಬಾಡಿಗೆಗೆ ಕೊಡಬೇಕು ಎಂದಾದರೆ ಕೃಷಿಯ ಮೇಲಿನ ಆಸಕ್ತಿಯೂ ಕಡಿಮೆಯಾಗಬಹುದು. ಸಾರಿಗೆ ಸಂಪರ್ಕ ಕೈಗಾರಿಕೆಗಳಿಗೆ ಯಾವ ರೀತಿಯಲ್ಲಿ ಮುಖ್ಯವೋ, ಕೃಷಿಗೂ ಅಷ್ಟೇ ಮುಖ್ಯ. ಅತ್ಯಂತ ತ್ವರಿತವಾಗಿ ಮಾರುಕಟ್ಟೆಗೆ ಅಥವಾ ಬೇಡಿಕೆ ಇರುವಲ್ಲಿಗೆ ತಲುಪಿಸುವ ವ್ಯವಸ್ಥೆ ಅತ್ಯಂತ ಅಗತ್ಯ.
ಬಹಳ ಮುಖ್ಯವಾಗಿ ಯುವಜನತೆಗೆ ಕೃಷಿಯಲ್ಲಿ ಆಸಕ್ತಿ ಮೂಡುವಂತಾಗಬೇಕು. ಈಗ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ತಲೆಮಾರು ಇಲ್ಲವಾದಲ್ಲಿ ಮುಂದೆ ಕೃಷಿ ಮಾಡುವವರು ಯಾರು? ಅದಕ್ಕೂ ರೋಬೋಟ್ ಗಳನ್ನು ತರಲು ಸಾಧ್ಯವೇ? ಶಾಂತಿ ಪರಿಸ್ಥಿತಿಯಲ್ಲೂ ಹಾಹಾಕಾರ ಉಂಟಾಗುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ಕೈಗಾರಿಕೋತ್ಪನ್ನಗಳು ಮತ್ತು ಸೇವಾ ವಲಯದ ಉತ್ಪನ್ನಗಳನ್ನು ಮಾರಾಟಮಾಡಲು ಯಾವ ತಂತ್ರಗಾರಿಕೆ ಬಳಸಲ್ಪಡುತ್ತವೆಯೋ ಅವೇ ತಂತ್ರಗಾರಿಕೆಗಳು ಕೃಷಿ ಉತ್ಪನ್ನಗಳ ಮಾರಾಟಕ್ಕೂ ಬಳಸಲು ಸಾಧ್ಯವೇ ಎಂಬ ಬಗ್ಗೆ ಚರ್ಚೆಗಳು ಅವಶ್ಯವಾಗಿ ಮತ್ತು ತುರ್ತಾಗಿ ನಡೆಯಬೇಕಾಗಿದೆ.
ಒಟ್ಟಿನಲ್ಲಿ ಭವಿಷ್ಯದ ದಿನಗಳಲ್ಲಾದರೂ ಭಾರತವೂ ಸೇರಿದಂತೆ ಜಗತ್ತಿನಲ್ಲಿ ಆಹಾರದ ಕೊರತೆ ಇಲ್ಲವಾಗಲಿ. ಆಹಾರವೆಂಬ ಮೂಲಭೂತ ಅಗತ್ಯ ಎಲ್ಲರಿಗೂ ತಲುಪಿ ಜಗತ್ತು ಸುಭಿಕ್ಷವಾಗಿರಲಿ ಎಂದು ಹಾರೈಸೋಣ.
- ಕಿಗ್ಗಾಲು ಜಿ. ಹರೀಶ್, ಮೂರ್ನಾಡು