ಸುಂಟಿಕೊಪ್ಪ, ಅ. ೧೪: ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹರದೂರು ಗ್ರಾಮದ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಮನೆ ಸ್ವರ್ಣಾಲಯದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಯುವ ಪೀಳಿಗೆಗೆ ಗಾಂಧಿ ಅವರ ಕೆಲಸ, ತತ್ವ ಆದರ್ಶಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಾನ್ ಮಾತನಾಡಿ, ಮಹಾತ್ಮ ಗಾಂಧಿ ಅವರು ೧೯೩೪ರ ಫೆ. ೨೨ ರಂದು ಕೊಡಗಿಗೆ ಆಗಮಿಸಿದ್ದರು. ಕೊಡಗಿನ ವಿವಿಧ ಕಡೆ ತೆರಳಿ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಹುರುಪು ನೀಡಿದ್ದರು ಎಂದು ನುಡಿದರು.
ಡೆಪ್ಯೂಟಿ ತಹಶೀಲ್ದಾರ್ ಶಿವಪ್ಪ ಮಾತನಾಡಿ, ಕೊಡಗಿಗೆ ಗಾಂಧಿ ಅವರನ್ನು ಕರೆ ತರುವಲ್ಲಿ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಪಾತ್ರ ಹೆಚ್ಚಾಗಿದೆ. ಹಲವಾರು ಸಾಮಾಜಿಕ ಸೇವೆಯನ್ನು ಮಂಜುನಾಥಯ್ಯ ಅವರು ಮಾಡಿದ್ದಾರೆ ಎಂದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ, ಮಹಾತ್ಮ ಗಾಂಧಿ ಅವರು ಕೊಡಗು ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿದ್ದರು. ಅವರ ನೆನಪಿಗಾಗಿ ಗಾಂಧಿ ಮಂಟಪ, ಗಾಂಧಿ ಮೈದಾನ, ಗಾಂಧಿ ಗದ್ದೆ ಇದೆ. ಅಲ್ಲದೆ ಜಿಲ್ಲಾಡಳಿತದ ಖಜಾನೆಯಲ್ಲಿ ಗಾಂಧಿ ಅವರ ಚಿತಾಭಸ್ಮವಿರುವುದು ವಿಶೇಷ ಎಂದು ಹೇಳಿದರು.
ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಮುಖುಲ್ ಮಹೀಂದ್ರ ಮಾತನಾಡಿ, ಮಹಾತ್ಮ ಗಾಂಧಿ ಅವರ ಕೆಲಸಗಳನ್ನು ತಿಳಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಮಾದಾಪುರದ ಚೆನ್ನಮ್ಮ ಕಾಲೇಜಿನ ಅಪ್ನ ತಸ್ಲಿಮ ಪ್ರಥಮ, ಸಂತ ಮೇರಿ ಶಾಲೆಯ ಸೃಜನ ದ್ವಿತೀಯ, ಮಾದಾಪುರ ಚೆನ್ನಮ್ಮ ಕಾಲೇಜಿನ ರಿಫಾ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅನ್ಸಿದಾ, ಮಾದಾಪುರ ಚೆನ್ನಮ್ಮ ಕಾಲೇಜಿನ ಸುನೈನಾ ತೃತೀಯ ಬಹುಮಾನ ಹಂಚಿಕೊAಡರು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೇಘ ಡಿ. ಪ್ರಥಮ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮೋಹಿತ್ ದ್ವಿತೀಯ ಬಹುಮಾನ ಪಡೆದರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಹರ್ಷಿತಾ ಪ್ರಥಮ, ಕವನ ದ್ವಿತೀಯ, ಲಿಖಿತ್ ಹೆಗ್ಡ್ ತೃತೀಯ ಬಹುಮಾನ ಪಡೆದರು. ಪದವಿ ಪೂರ್ವ ಕಾಲೇಜಿನ ವಿಭಾಗದಲ್ಲಿ ಮಾನ್ಯ ಪ್ರಥಮ, ಆರ್ಯ ದ್ವಿತೀಯ, ಅನ್ನಪೂರ್ಣ ತೃತೀಯ ಬಹುಮಾನ ಗಳಿಸಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಕಾರ್ಯದರ್ಶಿ ಡೆನಿಸ್ ಡಿಸೋಜ, ಸಂಚಾಲಕ ಎಂ.ಇ. ಮೊಹಿದ್ದೀನ್, ಕೋಶಾಧಿಕಾರಿ ರಮೇಶ್ ಪಿಳ್ಳೆ, ಟ್ರಸ್ಟಿ ಝಾಯ್ದ್ ಅಹ್ಮದ್, ಮುರುಗೇಶ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ನೆನಪಿಗಾಗಿ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಮನೆಯ ಆವರಣದಲ್ಲಿ ಮಾವಿನ ಹಣ್ಣಿನ ಗಿಡಗಳನ್ನು ನೆಡಲಾಯಿತು.