ಮಡಿಕೇರಿ, ಅ. ೧೪: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೂರ್ನಾಡು ವಲಯ ಹಾಗೂ ಮರಗೋಡು-ಹುಲಿತಾಳ ಪ್ರಗತಿಬಂಧು ಸ್ವಸಹಾಯ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮೂರ್ನಾಡು ಅನ್ನಪೂರ್ಣೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಡಾ. ಮಹಾಬಲೇಶ್ವರ ಭಟ್, ಹಗೆತನವನ್ನು ಮರೆತು ಒಗ್ಗೂಡಿ ದೇವರ ನೆನೆಯುವುದೇ ಹಬ್ಬವಾಗಿದೆ. ಕೆಟ್ಟ ವಿಚಾರಗಳಿಂದ ದೂರ ಉಳಿದು, ಉತ್ತಮ ಚಿಂತನೆಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಧಾರ್ಮಿಕತೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ.ಬಿ. ಶೇಖರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕಿ ಲೀಲಾವತಿ, ಮರಗೋಡು ಗ್ರಾ.ಪಂ. ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್, ಕಡಬ ಪ್ರಗತಿಪರ ಕೃಷಿಕ ಎನ್.ಕೆ. ನಾರಾಯಣ ರೈ, ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಜಿ. ಚಂದ್ರಕಲಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಚಿತ್ರದುರ್ಗಕ್ಕೆ ವರ್ಗವಣೆಗೊಂಡಿರುವ ಮೂರ್ನಾಡು ವಲಯ ಮೇಲ್ವಿಚಾರಕರಾದ ಅನುಷಾ ರೈ ಅವರನ್ನು ಸೇವಾಪ್ರತಿನಿಧಿಗಳು, ಪಾರಾಣೆ ಒಕ್ಕೂಟ ಹಾಗೂ ಮರಗೋಡು ನವಜೀವನ ಸಮಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಮರಗೋಡು ಒಕ್ಕೂಟದ ಅಧ್ಯಕ್ಷೆ ಮಮತ ಸ್ವಾಗತಿಸಿದರು. ಮೂರ್ನಾಡು ವಲಯ ಮೇಲ್ವಿಚಾರಕರಾದ ಅನುಷಾ ರೈ ವರದಿ ವಾಚಿಸಿದರು. ಮರಗೋಡು ಒಕ್ಕೂಟದ ಸೇವಾ ಪ್ರತಿನಿಧಿ ಲತಾ ವಂದಿಸಿದರು.