ಸೋಮವಾರಪೇಟೆ, ಅ. ೧೪: ಇಲ್ಲಿನ ಬಿ.ಟಿ.ಸಿ.ಜಿ. ಕಾಲೇಜಿಗೆ ಶಾಸಕ ಅಪ್ಪಚ್ಚು ರಂಜನ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಕ್ತ ವರ್ಷ ಪ್ರಥಮ ಬಿ.ಎ. ತರಗತಿಗೆ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿ ರುವ ಬಗ್ಗೆ ಮಾಹಿತಿ ಪಡೆದ ಶಾಸಕರು, ಕಾಲೇಜನ್ನು ಮುಚ್ಚುವ ಸ್ಥಿತಿಗೆ ತರಬೇಡಿ ಎಂದು ಉಪನ್ಯಾಸಕ ವರ್ಗಕ್ಕೆ ಎಚ್ಚರಿಸಿದರು.
ಇಲ್ಲಿನ ಜನರಿಗೆ, ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿ ಎಂದು ಬಿ.ಟಿ. ಚನ್ನಯ್ಯ ಮತ್ತು ಅವರ ತಂಡ ಕಾಲೇಜು ನಿರ್ಮಿಸಿದ್ದಾರೆ. ಈಗ ಸರ್ಕಾರ ನಡೆಸುತ್ತಿದೆ. ಆದರೆ ವಿದ್ಯಾರ್ಥಿಗಳೇ ಇಲ್ಲವಾದರೆ ಕಾಲೇಜು ನಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಕಾಲೇಜು ಆರಂಭವಾಗುವ ಸಮಯ, ಮುಗಿಯುವ ಸಮಯ, ಸಿಬ್ಬಂದಿಗಳ, ಉಪನ್ಯಾಸಕರ ಬಗ್ಗೆ ಮಾಹಿತಿ ಹಾಗೂ ಕಾಲೇಜಿನ ಪರಿಸ್ಥಿತಿಯ ಬಗ್ಗೆ ಪ್ರಾಂಶುಪಾಲ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
ಹೊಸ ಕೋರ್ಸುಗಳ ಆರಂಭದ ಬಗ್ಗೆ ಪ್ರಾಂಶುಪಾಲರು ತಿಳಿಸಿದಾಗ ಈ ಬಗ್ಗೆ ಶಾಸಕನಾಗಿ ನನ್ನ ಗಮನಕ್ಕೆ ತಂದಿಲ್ಲ. ಪ್ರಸ್ತಾವನೆ ಸಲ್ಲಿಸಿದ ನಂತರ ತನಗೂ ಒಂದು ಪ್ರತಿ ಕಳುಹಿಸಿ ಎಂದರು.
ಕಾಲೇಜು ಅಭಿವೃದ್ಧಿಗೆ ಸಂಬAಧಿಸಿದAತೆ ಉಪನ್ಯಾಸಕರು ಹಾಗೂ ಸಿಬ್ಬಂದಿಗಳಿAದಲೂ ಸಲಹೆ ಕೇಳಿದ ಶಾಸಕರು, ಸಾರ್ವಜನಿಕ ವಲಯದಲ್ಲಿ ಕಾಲೇಜಿನ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯಗಳನ್ನು ಮೊದಲು ಹೋಗಲಾಡಿಸಬೇಕು. ಪಿ.ಯು.ಸಿ. ನಂತರ ಈ ಕಾಲೇಜಿಗೆ ಪ್ರವೇಶ ಪಡೆಯುವಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಕಾಲೇಜು ಅವಧಿಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿಯೇ ಇರುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಪ್ರತಿನಿತ್ಯ ಬೆಳಿಗ್ಗೆ ೯.೩೦ಕ್ಕೆ ಬರಬೇಕು. ಊಟದ ಸಮಯ ಹೊರತುಪಡಿಸಿ ಸಂಜೆ ೩ ಗಂಟೆಯ ವರೆಗೆ ತರಗತಿಗಳನ್ನು ನಡೆಸಬೇಕು. ತಕ್ಷಣವೇ ಕಾಲೇಜು ಅಭಿವೃದ್ಧಿ ಸಮಿತಿಯನ್ನು ಕಾರ್ಯ ಪ್ರವೃತ್ತರಾಗಲು ತಿಳಿಸುವುದಾಗಿ ಶಾಸಕರು ಹೇಳಿದರು.
ಇದೇ ಸಂದರ್ಭ ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಗೊಂಡಿರುವ ಕಟ್ಟಡವೊಂದು ಪಾಳು ಬಿದ್ದಿರುವುದನ್ನು ವೀಕ್ಷಿಸಿದ ಶಾಸಕರು, ಕಾಲೇಜು ಹಾಗೂ ಸಭಾಂಗಣದ ಬಾಗಿಲುಗಳು ಈಗಾಗಲೇ ಗೆದ್ದಲು ಹಿಡಿದು ಹಾಳಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ದುರಸ್ತಿಪಡಿಸಿ, ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಸೂಚಿಸಿದರು.