ಕುಶಾಲನಗರ, ಅ. ೧೫: ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪ ಮಾಡುವ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸನ್ನು ನನಸು ಮಾಡಬೇಕು ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಕರೆ ನೀಡಿದ್ದಾರೆ.ಜಾತ್ಯತೀತ ಜನತಾದಳದ ಕುಶಾಲನಗರ ತಾಲೂಕು ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗದ್ದುಗೆ ಏರುವಂತೆ ಮಾಡುವುದು ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ ಎಂದರು.
ತಾಲೂಕು ಘಟಕ ಅಧ್ಯಕ್ಷ ಪಿ.ಡಿ. ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ಕುಮಾರ್ ಮಾತನಾಡಿ, ಕೊಡಗಿನ ಜನತೆ ಪ್ರಾದೇಶಿಕ ಪಕ್ಷದತ್ತ ಒಲವು ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.
ಕೊಡಗು ಯುವ ಜನತಾದಳ ಜಿಲ್ಲಾ ಅಧ್ಯಕ್ಷರಾದ ಸಿ.ಎಲ್. ವಿಶ್ವ ಮಾತನಾಡಿ, ಜನ ಸಾಮಾನ್ಯರ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿ ಬಿಜೆಪಿ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಸುಮಾರು ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರ ನೀಡಲಾಯಿತು.
ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹನಕೋಡ್ ಸುರೇಶ್, ಎಸ್ಸಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ರಾಮಚಂದ್ರ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಶಿವದಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಮುಖಂಡರಾದ ಅಜ್ಜಳ್ಳಿ ರವಿ, ಎಂ.ಎಸ್. ರಾಜೇಶ್, ಹೆಚ್.ಡಿ. ಚಂದ್ರು, ಹೆಬ್ಬಾಲೆ ಮಧುಸೂದನ್ ಮತ್ತಿತರರು ಹಾಜರಿದ್ದರು.