ಸುಂಟಿಕೊಪ್ಪ, ಅ. ೧೪: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವೀರಾಜಪೇಟೆಯ ಮೊಣ್ಣಂಡ ಕೆ. ಚಂಗಪ್ಪ ಸ್ಮಾರಕ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಪ್ರೌಢಶಾಲೆಯ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಉದ್ಘಾಟಿಸಿದರು. ಕನ್ನಡ ಹಾಗೂ ಕೊಡವ ಭಾಷೆ ಬೆಳವಣಿಗೆ ಕುರಿತು ಮಡಿಕೇರಿ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿ ಗಳು ಪತ್ರಿಕೆ, ಕಥೆ, ಕಾದಂಬರಿ ಓದುವತ್ತ ಗಮನ ಹರಿಸಬೇಕೆಂದರು. ಕನ್ನಡ ಭಾಷೆ ಬೆಳೆಯಬೇಕಾದರೆ ಅದರ ಬಳಕೆಯನ್ನು ಹೆಚ್ಚಾಗಿ ಮಾಡಬೇಕು ಶುದ್ಧ ಕನ್ನಡ ಭಾಷೆ ಬಳಕೆಯ ಅಗತ್ಯತೆ ಇದೆ ಎಂದರು. ಅದರಂತೆ ಕೊಡಗಿನಲ್ಲಿ ಕೊಡವ ಭಾಷೆಯು ಒಂದು ಭಾಷೆಯಾಗಿದ್ದು ಹಲವಾರು ಲೇಖಕರು ಕಥೆೆಗಳನ್ನು ರಚಿಸಿದ್ದು ಅವುಗಳನ್ನು ಓದುವಂತೆ ಹಾಗೂ ಶಾಲೆಯಲ್ಲಿ ಶಿಕ್ಷಕರು ಪಾಠದೊಂದಿಗೆ ಕಥೆ ಕಾದಂಬರಿಗಳಿಗೆ ಲೇಖನಗಳಿಗೆ ಒತ್ತು ನೀಡುವಂತೆ ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಕೇಶವಕಾಮತ್ ಹಾಗೂ ಸಿ.ಟಿ. ಸೋಮಶೇಖರ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ ವಹಿಸಿದ್ದರು. ಇದೇ ಸಂದರ್ಭ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರೌಢಶಾಲಾ ಪ್ರಾಂಶುಪಾಲ ಬಾಲಕೃಷ್ಣ, ಜಿಲ್ಲಾ ಕಸಾಪ ನಿರ್ದೇಶಕ ರಾದ ಬಿ.ಎ. ಉಮೇಶ್, ಚಂದ್ರ, ಮಂಜು, ಸುಂಟಿಕೊಪ್ಪ ಕಸಾಪ ಅಧ್ಯಕ್ಷ ಪಿ.ಎಫ್. ಸಭಾಸ್ಟಿನ್, ಕಾರ್ಯದರ್ಶಿ ಲೀಲಾ ಮೇದಪ್ಪ, ಸದಸ್ಯ ವಹೀದ್‌ಜಾನ್, ಟಿ.ಜಿ. ಪ್ರೇಮ್‌ಕುಮಾರ್ ಇತರರು ಹಾಜರಿದ್ದರು. ಶಾಲಾ ಶಿಕ್ಷಕಿ ಲಿಯೋನಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ವಂದಿಸಿದರು.