ಹಿಜಾಬ್ ವಿವಾದ : ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ

ನವದೆಹಲಿ, ಅ. ೧೩: ಬಹುನಿರೀಕ್ಷಿತ ಹಿಜಾಬ್ ವಿವಾದ ಕುರಿತು ಸುಪ್ರೀಂಕೋರ್ಟ್ನ ನ್ಯಾಯಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುದೀರ್ಘ ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ ಒಮ್ಮತದ ತೀರ್ಮಾನಕ್ಕೆ ಬರಲಾಗದೆ ಇಂದು ಭಿನ್ನ ತೀರ್ಪು ನೀಡಿ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿದೆ. ಮುಂದೆ ವಿಸ್ತೃತ ಪೀಠ ರಚನೆ ಮಾಡಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಅಲ್ಲಿಯವರೆಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ. ಇಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಸುಪ್ರೀಂಕೋರ್ಟ್ನ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಹಿಜಾಬ್ ವಿವಾದ ಕುರಿತು ಭಿನ್ನ ತೀರ್ಪುಗಳನ್ನು ನೀಡಿರುವುದರಿಂದ ನಿರ್ದಿಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಸೂಕ್ತ ನಿರ್ದೇಶನಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತ ತಳ್ಳಿಹಾಕಿದರೆ ನ್ಯಾಯಮೂರ್ತಿ ಸುಧಾಂಶು ಧುನಿಯಾ ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿದರು. ನ್ಯಾಯಮೂರ್ತಿ ಧುಲಿಯಾ, ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರದ ಫೆಬ್ರವರಿ ೫ರ ಆದೇಶವನ್ನು ತಳ್ಳಿಹಾಕಿದರು. ಹಿಜಾಬ್ ಧರಿಸುವುದು ಅಂತಿಮವಾಗಿ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಬಿಜೊಯ್ ಎಮೆನ್ಯುಯೆಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಹಾಕಿರುವ ಅನುಪಾತ ಇದನ್ನು ಸೂಚಿಸುತ್ತದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ನನಗೆ ಮುಖ್ಯವಾಗಿ ಕಾಣುತ್ತದೆ. ಹೆಣ್ಣು ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನೂ ಹಲವು ಸಮಸ್ಯೆಗಳು ಆಕೆಗಿರುತ್ತವೆ, ಹಾಗಿರುವಾಗ ನಾವು ಶಿಕ್ಷಣದಲ್ಲಿ ಮತ್ತಷ್ಟು ನಿರ್ಬಂಧ ಹಾಕಿ ಅವಳ ಜೀವನವನ್ನು ಉತ್ತಮಗೊಳಿಸುತ್ತೇವೆಯೇ ಎಂದು ಪ್ರಶ್ನಿಸಿದರು. ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ ಅಲ್ಲಿ ಸೂಕ್ತ ಪೀಠ ರಚಿಸುವಂತೆ ಸೂಚಿಸಿದರು. ಕಳೆದ ಹತ್ತು ದಿನಗಳ ವ್ಯಾಪಕ ವಿಚಾರಣೆಯ ನಂತರ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು. ಹಿಜಾಬ್ ನಿಷೇಧದ ವಿರುದ್ಧ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ರಾಜೀವ್ ಧವನ್, ಸಂಜಯ್ ಹೆಗ್ಡೆ, ದೇವದತ್ ಕಾಮತ್ ವಾದ ಮಂಡಿಸಿದರು. ಕರ್ನಾಟಕ ಸರ್ಕಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕ ಎಜಿ ಪ್ರಭುಲಿಂಗ ನಾವಡಗಿ ಮತ್ತು ಎಎಸ್‌ಜಿ ಕೆ.ಎಂ. ನಟರಾಜ್ ಅವರು ವಾದ ಮಂಡಿಸಿದರು.

ಐಇಡಿ ಸ್ಫೋಟಕಗಳು ಪತ್ತೆ

ಜಮ್ಮು, ಅ. ೧೩: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಅರಣ್ಯ ಪ್ರದೇಶದಿಂದ ಬ್ಯಾಗ್‌ನಲ್ಲಿ ಮೂರು ಶಕ್ತಿಶಾಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡಿದ್ದು, ಭಾರಿ ದುರಂತವೊAದನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ತಡರಾತ್ರಿ ಸೇನೆ ಮತ್ತು ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಗೂಲ್ ಉಪವಿಭಾಗದ ಸಂಗಲ್ದನ್ ಅರಣ್ಯದಲ್ಲಿ ಚೀಲ ಬಿದ್ದಿರುವುದನ್ನು ತಂಡ ಪತ್ತೆಮಾಡಿದೆ ಎಂದು ಅವರು ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕೆಲವರ ಅನುಮಾನಾಸ್ಪದ ಚಲನವಲನದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಬಿಜೆಪಿ ಮುಖಂಡನ ಪತ್ನಿ ಸಾವು

ಉಧಮ್‌ಸಿಂಗ್ ನಗರ, ಅ. ೧೩: ಆರೋಪಿಯೊಬ್ಬನನ್ನು ಹಿಡಿಯಲು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ನಿವಾಸದ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದಾಳಿಯಲ್ಲಿ ದುರಂತ ಸಂಭವಿಸಿದ್ದು, ಬಿಜೆಪಿ ಮುಖಂಡನ ಪತ್ನಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಉಧಮ್‌ಸಿಂಗ್ ನಗರದ ಕಾಶಿಪುರ ಪ್ರದೇಶದ ಭರತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೋಪಗೊಂಡ ಗ್ರಾಮಸ್ಥರು ಪೊಲೀಸ್ ತಂಡವನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅವರ ನಿವಾಸದಲ್ಲಿ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಆತನನ್ನು ಬಂಧಿಸಲೆAದು ಉತ್ತರ ಪ್ರದೇಶ ಪೊಲೀಸರ ತಂಡವು ಭರತ್‌ಪುರ ಗ್ರಾಮದಲ್ಲಿ ಬಿಜೆಪಿಯ ಸ್ಥಳೀಯ ಪ್ರದೇಶ ಬ್ಲಾಕ್ ಅಧ್ಯಕ್ಷ ಗುರ್ತಾಜ್ ಭುಲ್ಲರ್ ಅವರ ನಿವಾಸದ ಮೇಲೆ ದಾಳಿ ನಡೆಸಿತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಜೆಪಿ ಮುಖಂಡನ ಪತ್ನಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಹಾರಿಸಿದ ಗುಂಡು ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್‌ಗೆ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಗ್ರರ ಎದುರು ಹೋರಾಡಿದ್ದ ‘ಜೂಮ್’ ಇನ್ನಿಲ್ಲ

ಶ್ರೀನಗರ, ಅ. ೧೩: ಉಗ್ರರ ವಿರುದ್ಧದ ಹೋರಾಟದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಭಾರತೀಯ ಸೇನೆಯ ಶ್ವಾನ ಜೂಮ್ ಗುರುವಾರ ಸಾವನ್ನಪ್ಪಿದೆ. ಎರಡು ಬಾರಿ ಉಗ್ರರಿಂದ ಗುಂಡೇಟು ತಿಂದಿದ್ದ ಈ ಶ್ವಾನವನ್ನು ಶ್ರೀನಗರದ ಸಶಸ್ತç ಪಡೆಗಳ ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ ಮತ್ತು ಹಿಂಭಾಗದ ಬಲಗಾಲಿನ ಮೇಲೆ ಗುಂಡಿನ ಗಾಯವಾಗಿದ್ದ ಕಾರಣ ಅದಕ್ಕೆ ಶಸ್ತçಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸೇನೆಯ ಶ್ವಾನ ಇಂದು ಮಧ್ಯಾಹ್ನ ೧೨ ಗಂಟೆ ಸುಮಾರಿನಲ್ಲಿ ಸಾವನ್ನಪ್ಪಿದೆ. ಬೆಳಿಗ್ಗೆ ೧೧ ಗಂಟೆಗೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಶ್ವಾನ, ಇದಕ್ಕಿದ್ದಂತೆ ಏದುಸಿರು ಬಿಡುತ್ತಾ, ಕೆಳಗೆ ಬಿದ್ದು ಸಾವನ್ನಪ್ಪಿದೆ. ಉಗ್ರರು ಅಡಗಿರುವ ಮನೆಯಿಂದ ಆ ಉಗ್ರರನ್ನು ಹೊರಗೆ ಕರೆತರುವ ಕೆಲಸವನ್ನು ಜೂಮ್ ನಾಯಿಗೆ ವಹಿಸಲಾಗಿತ್ತು. ಆ ನಾಯಿ ಮನೆಯೊಳಗೆ ಹೋಗಿ ಉಗ್ರರ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆ ನಾಯಿಯ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆಸಿದ್ದರಿಂದ ನಾಯಿಗೆ ಗಂಭೀರವಾದ ಗಾಯವಾಗಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರೂ ಹೆದರದ ಈ ನಾಯಿ ತನ್ನ ಕಾರ್ಯವನ್ನು ಮುಂದುವರೆಸಿತು.

ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ : ಶಾಸಕನಿಗೆ ಜೈಲು ಶಿಕ್ಷೆ

ಬೆಂಗಳೂರು, ಅ. ೧೩: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ ಪ್ರಕರಣಕ್ಕೆ ಸಂಬAಧಿಸಿದAತೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣ ಸಂಬAಧ ಇಂದು ತೀರ್ಪು ನೀಡಿದ ಬೆಂಗಳೂರಿನ ೪೨ನೇ ಎಸಿಎಂಎA ಕೋರ್ಟ್, ಉದಯ್ ಗರುಡಾಚಾರ್‌ಗೆ ೨ ತಿಂಗಳು ಜೈಲು ಹಾಗೂ ರೂ. ೧೦ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಉದಯ್ ಗರುಡಾಚಾರ್ ೨೦೧೮ರ ಚುನಾವಣೆಯಲ್ಲಿ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ ೫೭,೩೧೨ ಮತಗಳನ್ನು ಪಡೆದು ಕಾಂಗ್ರೆಸ್‌ನ ಆರ್.ವಿ. ದೇವರಾಜ್ ವಿರುದ್ಧ ಗೆಲುವು ಸಾಧಿಸಿದ್ದರು.

ಹರ್ಷ ಕೊಲೆ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು, ಅ. ೧೩: ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಜಾಫರ್ ಸಾದಿಕ್ (೫೨) ಎಂಬಾತನಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಸಾದಿಕ್‌ನನ್ನು ಫೆಬ್ರವರಿ ೨೪ ರಂದು ಬಂಧಿಸಿದ್ದ ಪೊಲೀಸರು, ಹರ್ಷ ಕೊಲೆ ಪ್ರಕರಣದಲ್ಲಿ ೧೦ನೇ ಆರೋಪಿಯಾಗಿ ಮಾಡಿದ್ದರು. ಪ್ರಕರಣದ ೬ನೇ ಆರೋಪಿ ಜಿಲಾನ್‌ನ ತಂದೆಯಾದ ಸಾದಿಕ್, ಜಾಮೀನು ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.