ಗುಡ್ಡೆಹೊಸೂರು, ಅ. ೧೩: ಬೇಟೆಗೆ ತೆರಳಿದ ಸಂದರ್ಭ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಗುಂಡೇಟು ತಗುಲಿ ಮೃತಪಟ್ಟಿರುವುದು ತನಿಖೆ ವೇಳೆ ದೃಢಪಟ್ಟಿದೆ.

ಸಮೀಪದ ರಂಗಸಮುದ್ರ ಗ್ರಾಮದ ವಿರೂಪಾಕ್ಷಪುರದ ವಿನೋದ್ ಗುಂಡಿಗೆ ಬಲಿಯಾದ ದುರ್ಧೈವಿ. ಮೃತ ವಿನೋದ್ ಸೇರಿದಂತೆ ಸ್ನೇಹಿತರಾದ ಧರ್ಮ, ಯೋಗೇಶ್, ಈಶ್ವರ್ ಎಂಬವರು ಕಾಡು ಪ್ರಾಣಿಗಳ ಬೇಟೆಗೆ ತೆರಳಿದ ಸಂದರ್ಭ ಈ ಘಟನೆ ಸಂಭವಿಸಿದೆ.

ಘಟನೆ ಹಿನ್ನೆಲೆ

ಕಳೆದ ನಾಲ್ಕು ದಿನಗಳ ಹಿಂದೆ ಈ ನಾಲ್ವರು ಬೇಟೆಗೆಂದು ಗ್ರಾಮದ ಮೂಲಕ ಹರಿಯುವ ನದಿಯನ್ನು ದಾಟಿದ ಮತ್ತೊಂದು ಭಾಗದ ಮೈಸೂರು ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ರಾತ್ರಿ ತೆರಳಿದ್ದಾರೆ. ಈ ಸಂದರ್ಭ ಇತರ ಸ್ನೇಹಿತರು ಕಾಡಿನಿಂದ ಬಂದಿದ್ದು, ವಿನೋದ್ ಮಾತ್ರ ಬಾರದೆ ನಾಪತ್ತೆಯಾಗಿರುವುದು ಕುಟುಂಬದಲ್ಲಿ ಆತಂಕ ಮೂಡಿಸಿತ್ತು. ನಂತರ ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಾಯದಿಂದ ವಿನೋದ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೇಟೆಗೆ ತೆರಳಿದ ಮೂವರ ಪೈಕಿ ಧರ್ಮ ಎಂಬಾತನ ವಿಚಾರಣೆ ನಡೆಸಿದಾಗ ಆಕಸ್ಮಿಕವಾಗಿ ಗುಂಡು ತಗುಲಿ ಮೃತದೇಹವನ್ನು ಹೊತ್ತು ತರುವ ಸಂದರ್ಭ ನದಿಯಲ್ಲಿ ದೇಹ ಜಾರಿ ತೇಲಿ ಹೋಗಿರುವುದು ತಿಳಿದು ಬಂದಿದೆ.

(ಮೊದಲ ಪುಟದಿಂದ) ಬೇಟೆಗೆ ತೆರಳಿದ್ದ ಯೋಗೇಶ್ ಮತ್ತು ಈಶ್ವರ್ ತಲೆಮರೆಸಿಕೊಂಡಿದ್ದು ಅವರುಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಆಕಸ್ಮಿಕವಾಗಿ ಈಶ್ವರ್‌ಗೆ ಸೇರಿದ ಕೋವಿಯಿಂದ ವಿನೋದ್ ಹಣೆಭಾಗಕ್ಕೆ ಗುಂಡು ತಗುಲಿದೆ. ಇದರಿಂದ ವಿಚಲಿತಗೊಂಡ ಮೂವರು ಮೃತದೇಹವನ್ನು ಅರಣ್ಯ ಪ್ರದೇಶದಿಂದ ಹೊತ್ತು ನದಿಯನ್ನು ದಾಟಿಸುವ ಯತ್ನ ನಡೆಸಿದ್ದಾರೆ. ಆದರೆ, ಈ ಸಂದರ್ಭ ಮೃತದೇಹ ನೀರಿನಲ್ಲಿ ತೇಲಿ ಹೋಗಿದೆ. ಈ ಬಗ್ಗೆ ಯಾರಿಗೂ ತಿಳಿಸದೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ. ಅಲ್ಲದೆ ಕಾಡು ಪ್ರಾಣಿಗೂ ಒಂದು ಗುಂಡು ಹೊಡೆದಿರುವ ಮಾಹಿತಿ ಲಭ್ಯವಾಗಿದೆ. ಮೃತ ವಿನೋದ್ ತಂದೆ, ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

-ಗಣೇಶ್ ಕುಡೆಕ್ಕಲ್