ಜೀವವಾಧಿ ಶಿಕ್ಷೆ ಎದುರಿಸುತ್ತಿದ್ದವರು ಖುಲಾಸೆ

ನಾಗ್ಪುರ, ಅ. ೧೪: ಮಾವೋವಾದಿಗಳ ಸಂಪರ್ಕ ಹೊಂದಿರುವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊ. ಜಿ.ಎನ್. ಸಾಯಿಬಾಬಾ ಸೇರಿ ಐವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಖುಲಾಸೆಗೊಳಿಸಿದ ನ್ಯಾಯಾಲಯ ತಕ್ಷಣವೇ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ವ್ಹೀಲ್‌ಚೇರ್ ಆಶ್ರಯ ಹೊಂದಿರುವ ಸಾಯಿಬಾಬಾ ಅವರು ಸದ್ಯ ನಾಗ್ಪುರ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನ್ಯಾಯಮೂರ್ತಿಗಳಾದ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರ ವಿಭಾಗೀಯ ಪೀಠವು ಸಾಯಿಬಾಬಾ ಅವರು ಅಪರಾಧಿ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದ ಸೆಷನ್ ನ್ಯಾಯಾಲಯದ ೨೦೧೭ ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತು. ಪ್ರಕರಣದ ಇತರ ಐವರು ಅಪರಾಧಿಗಳ ಮೇಲ್ಮನವಿಯನ್ನು ಸಹ ಪೀಠವು ಅಂಗೀಕರಿಸಿತು ಮತ್ತು ಅವರನ್ನು ಖುಲಾಸೆಗೊಳಿಸಿತು. ಮೇಲ್ಮನವಿ ವಿಚಾರಣೆಗೆ ಮುನ್ನವೇ ಐವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಪರಾಧಿಗಳು ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಗಳಾಗಿರದೇ ಇದ್ದಲ್ಲಿ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ಪೀಠ ಸೂಚಿಸಿದೆ. ಮಾರ್ಚ್ ೨೦೧೭ ರಲ್ಲಿ, ಮಹಾರಾಷ್ಟçದ ಗಡ್ಚಿರೋಲಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ, ಪತ್ರಕರ್ತ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೇರಿದಂತೆ ಇತರರನ್ನು ಮಾವೋವಾದಿ ಸಂಪರ್ಕಗಳ ಆರೋಪದ ಮೇಲೆ ಮತ್ತು ದೇಶದ ವಿರುದ್ಧ ಯುದ್ಧ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿಕ್ಷೆ ವಿಧಿಸಿತ್ತು.

ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಅ. ೧೪: ರಾಜ್ಯದ ವಿವಿಧೆಡೆ ಮುಂದಿನ ೨೪ ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ೨೪ ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ೪೮ ಘಂಟೆಗಳು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುರುಘಾಶ್ರೀ ವಿರುದ್ಧ ಮತ್ತೊಂದು ಪ್ರಕರಣ

ಮೈಸೂರು, ಅ. ೧೪: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇಲ್ಲಿನ ನಜರಬಾದ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಮಠದ ವಿದ್ಯಾರ್ಥಿ ನಿಲಯದಲ್ಲಿದ್ದ ಬಾಲಕಿಯು ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾಳೆ. ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಪೋಷಕರೊಂದಿಗೆ ಹಾಜರಾದ ಬಾಲಕಿಯು, ಶರಣರಿಂದ ತನಗಾಗಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಳು. ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಪ್ರಕಾರ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಮುರುಘಾ ಶರಣರು ಸೇರಿದಂತೆ ಒಟ್ಟು ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ನ. ೧೦ಕ್ಕೆ ವಂದೇ ಭಾರತ್ ರೈಲು ಉದ್ಘಾಟನೆ

ನವದೆಹಲಿ, ಅ. ೧೪: ನವೆಂಬರ್ ೧೦ ರಂದು ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುತ್ತಿದ್ದು ಈ ರೈಲು ಚೆನ್ನೆöÊ-ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ದೆಹಲಿ–ಉನಾ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಸರಣಿಯ ೪ನೇ ರೈಲಿಗೆ ಪ್ರಧಾನಿ ಮೋದಿ ಹಿಮಾಚಲ ಪ್ರದೇಶದಲ್ಲಿ ಚಾಲನೆ ನೀಡಿದ್ದರು. ಇದೀಗ ನವೆಂಬರ್ ೧೦ ರಂದು ವಂದೇ ಭಾರತ್ ಎಕ್ಸ್ಪ್ರೆಸ್‌ನ ೫ನೇ ರೈಲಿಗೆ ಚಾಲನೆ ಸಿಗಲಿದೆ.

ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮಾವೇಶ

ಬೆಂಗಳೂರು, ಅ. ೧೪: ತಾ. ೨೧ ರೊಳಗೆ ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು ಎಂದು ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮಾಡುತ್ತಿರುವ ಹೋರಾಟ ೨ ವರ್ಷ ತಲುಪಿದೆ. ಆದರೂ ಸರ್ಕಾರ ಯಾವುದೇ ತೀರ್ಮಾನ ನೀಡದೆ ಸುಮ್ಮನಾಗಿದೆ ಎಂದು ಕಿಡಿಕಾರಿದರು. ಇನ್ನು ಹುಕ್ಕೇರಿಯಲ್ಲಿ ತಾ. ೨೧ ರಂದು ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ನಡೆಯಲಿದೆ. ಅಷ್ಟರೊಳಗೆ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಲಿಂಗಾಯತ ಪಂಚಮಸಾಲಿಗೆ ೨ಎ ಮೀಸಲಾತಿ ಕೊಡುವ ಸಂಬAಧ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಹುಕ್ಕೇರಿ ಸಮಾವೇಶದಲ್ಲಿ ವಿಧಾನಸೌಧ ಮುತ್ತಿಗೆಗೆ ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹರೀಶ್ ಪೂಂಜಾಗೆ ಬೆದರಿಕೆ

ಮಂಗಳೂರು, ಅ. ೧೪: ಕೆಲ ಅಪರಿಚಿತ ದುಷ್ಕರ್ಮಿಗಳು ತಾ. ೧೩ ರ ರಾತ್ರಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆನ್ನಟ್ಟಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. ಈ ಸಂಬAಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನಿAದ ಬಂದಿದ್ದ ಶಾಸಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಮಂಗಳೂರು ಸರ್ಕ್ಯುಟ್ ಹೌಸ್‌ಗೆ ತೆರಳಿ ಅಲ್ಲಿ ಸಭೆ ಮುಗಿಸಿಕೊಂಡು ಮತ್ತೊಂದು ಕಾರಿನಲ್ಲಿ ಶಾಸಕರು ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದರು. ನಗುರಿ ರೈಲ್ವೆ ಮೇಲ್ಸೇತುವೆ ಬಳಿ ತಲುಪಿದಾಗ ಸ್ಕಾರ್ಪಿಯೊ ಕಾರಿನಲ್ಲಿ ಬಂದ ವ್ಯಕ್ತಿ ಹಿಂಬಾಲಿಸಲು ಆರಂಭಿಸಿದ. ಬಳಿಕ ಶಾಸಕರ ಕಾರನ್ನು ಅಡ್ಡಗಟ್ಟಿ ಬೈಯುತ್ತಾ ಫರಂಗಿಪೇಟೆ ಮೀನು ಮಾರುಕಟ್ಟೆ ಹತ್ತಿರ ಕತ್ತಿ ತೋರಿಸಿ ಬೆದರಿಕೆ ಹಾಕಿದ. ನಂತರ ಬಿ.ಸಿ. ರೋಡ್‌ನತ್ತ ಆರೋಪಿ ಕಾರಿನಲ್ಲಿ ಹೊರಟು ಹೋದ ಎಂದು ಶಾಸಕ ಹರೀಶ್ ಪೂಂಜಾ ಅವರ ಕಾರಿನ ಚಾಲಕ ನವೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಾವಿನ ಪ್ರಕರಣ:೧೭ ಅರಣ್ಯಾಧಿಕಾರಿಗಳ ವಿರುದ್ಧ ಕೇಸು ದಾಖಲು

ಮೈಸೂರು, ಅ. ೧೪: ಬಂಡೀಪುರ ಅರಣ್ಯ ವಲಯದ ಗುಂಡ್ರೆ ರೇಂಜ್‌ನಲ್ಲಿ ಆದಿವಾಸಿ ವ್ಯಕ್ತಿಯೊಬ್ಬ ಅರಣ್ಯಾಧಿಕಾರಿಗಳ ವಶದಲ್ಲಿದ್ದ ವೇಳೆ ಮೃತಪಟ್ಟ ಘಟನೆಗೆ ಸಂಬAಧಿಸಿದAತೆ ಸರಗುರ್ ಪೊಲೀಸರು ೧೭ ಮಂದಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ, ಪ್ರಕರಣದಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಅಮೃತೇಶ್, ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಯಾದವ್, ಇಬ್ಬರು ಅರಣ್ಯಾಧಿಕಾರಿಗಳು ಮತ್ತು ಇತರ ೧೩ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೊಸಹಳ್ಳಿ ಗ್ರಾಮದ ಕರಿಯಪ್ಪ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿಟ್ಟು ಕೊಂಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದನು. ಅರಣ್ಯಾಧಿಕಾರಿಗಳ ಕಸ್ಟಡಿಯಲ್ಲಿ ಆತ ಮೃತಪಟ್ಟಿದ್ದು, ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಅವರು ಕರಿಯಪ್ಪ ಮೃತದೇಹ ಇರಿಸಿದ್ದ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದರು. ಅವರ ಸಾವಿನ ಬಗ್ಗೆ ಸಿಐಡಿ ತನಿಖೆಗೆ ಒತ್ತಾಯಿಸಿದರು. ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವುದರ ಜೊತೆಗೆ ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಮ್ಯಾಜಿಸ್ಟೆçÃಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕರಿಯಪ್ಪ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.