ಸಿದ್ದಾಪುರ, ಅ. ೧೪: ಜಿಲ್ಲೆಯಲ್ಲಿ ನಡೆಯುತ್ತಿರುವ ವನ್ಯಜೀವಿಗಳ ಹಾವಳಿಗಳನ್ನು ತಡೆಗಟ್ಟಬೇಕು ಹಾಗೂ ಆನೆ-ಮಾನವ ಸಂಘರ್ಷ ತಡೆಗೆ ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನವೆಂಬರ್ ತಿಂಗಳಿನ ಮೊದಲ ವಾರದಲ್ಲಿ ಮಡಿಕೇರಿಯ ಅರಣ್ಯ ಭವನ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅಮ್ಮತ್ತಿ ಹೋಬಳಿ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿವೆ. ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಹುಲಿಯ ಆತಂಕ ಹೆಚ್ಚಾಗಿದೆ. ಹುಲಿಯು ಮಾನವನ ಮೇಲೆ ದಾಳಿ ನಡೆಸುತ್ತಾ ಜಾನುವಾರುಗಳನ್ನು ಸಾಯಿಸುತ್ತಿರುವುದು ಭಯ ಮೂಡಿಸಿದೆ. ಕಾಡಾನೆಗಳ ಹಾಗೂ ಹುಲಿಗಳ ಹಾವಳಿಯಿಂದಾಗಿ ರೈತರ ಬದುಕು ಹಾಗೂ ಕಾರ್ಮಿಕರ ಜೀವನ ಶೋಚನೀಯವಾಗಿದೆ. ಭಯದ ನೆರಳಿನಲ್ಲಿ ದಿನದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕಾಡಾನೆ ಹಾವಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತಿತಿಮತಿ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಇದು ತೀವ್ರ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಸ್ಪಂದನ ದೊರೆತಿಲ್ಲ ಎಂದರು. ಇದೀಗ ಈ ಭಾಗದಲ್ಲಿ ಹುಲಿ ಹಾಗೂ ಆನೆ ಸಫಾರಿ ಆರಂಭಿಸಲು ಅರಣ್ಯ ಇಲಾಖೆಯು ಮುಂದಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಫಾರಿ ನಿರ್ಮಾಣ ಮಾಡುವ ಬದಲು ನಷ್ಟಗೊಂಡಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ವನ್ಯ ಜೀವಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಒತ್ತಾಯಿಸಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಮಡಿಕೇರಿಯ ಅರಣ್ಯ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದರು.
ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಶಾಖೆಯ ಅಧ್ಯಕ್ಷ ದೇವಣೀರ ಬೋಪಣ್ಣ ಮಾತನಾಡಿ ೨೦೧೮ ರಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಡಿಕೇರಿಯ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಲಾಗಿತ್ತು. ಇದಾದ ನಂತರ ಅರಣ್ಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡು ಉಪಟಳ ನೀಡುತ್ತಿದ್ದ ಕೆಲವು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ್ದರು. ನಂತರ ಇದೀಗ ಮತ್ತೆ ಕಾಡಾನೆಗಳ ಹಾಗೂ ಹುಲಿಗಳ ಹಾವಳಿ ಮಿತಿಮೀರಿದ್ದು ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾನೂನು ಸಲಹೆಗಾರರು ಕೆ.ಬಿ ಹೇಮಚಂದ್ರ ಮಾತನಾಡಿ ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಹಂತ ಹಂತವಾಗಿ ಪರಿಹಾರ ಧನವನ್ನು ಹೆಚ್ಚಿಸಲು ರೈತ ಸಂಘದ ಹೋರಾಟ ಕಾರಣವಾಗಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ನಡೆಸುವ ಸಭೆಯಿಂದ ರೈತರಿಗೆ ಹಾಗೂ ಕಾರ್ಮಿಕರಿಗೆ ಏನು ಪ್ರಯೋಜನವಿಲ್ಲ. ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಿಂದ ಕಾಫಿ ತೋಟಗಳು ನಾಶವಾಗುತ್ತಿದೆ ಹೊರತು ಸಮಸ್ಯೆ ಬಗೆಹರಿದಿಲ್ಲ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿದರು.
ಮಡಿಕೇರಿಯ ಅರಣ್ಯ ಭವನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯ ಅಂಗವಾಗಿ ಪೂರ್ವಭಾವಿ ಸಭೆಯು ತಾ. ೩೧ ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಡಿಕೇರಿಯಂಡ ಮಾಚಯ್ಯ, ಸಿದ್ದಾಪುರ ಘಟಕದ ಖಜಾಂಚಿ ಎಂ.ವಿ. ಸಜೀವನ್, ಹೆಚ್.ಎಂ. ಮಾದಪ್ಪ, ಸಂಚಾಲಕ ಚೇನಂಡ ಪೂಣಚ್ಚ, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಹೆಚ್.ಬಿ. ರಮೇಶ್ ಇನ್ನಿತರರು ಹಾಜರಿದ್ದರು.