ಭಾಗಮಂಡಲ, ಅ. ೧೩: ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವ ತಾ.೧೭ರಂದು ರಾತ್ರಿ ೭.೨೧ಕ್ಕೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ಕ್ಷೇತ್ರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ತಾ. ೧೫ರಂದು ಬೆಳಿಗ್ಗೆ ೧೧.೪೫ಕ್ಕೆ ಅಕ್ಷಯ ಪಾತ್ರೆ ಇರಿಸುವುದು, ಸಂಜೆ ೪.೧೫ಕ್ಕೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇಡುವ ಕಾರ್ಯಗಳು ನೆರವೇರಲಿವೆ.
ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಭಕ್ತರ ಪುಣ್ಯ ಸ್ನಾನಕ್ಕಾಗಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ಭಾಗಮಂಡಲದಲ್ಲಿ ಆರು ತಾತ್ಕಾಲಿಕ ಶೌಚಾಲಯಗಳನ್ನು ತೆರೆಯಲಾಗುತ್ತಿದೆ. ಭಾಗಮಂಡಲದಿAದ ತಲಕಾವೇರಿವರೆಗೆ ಎಲ್ಲಾ ಬೀದಿ ದೀಪಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವ ಕಾರ್ಯವನ್ನು ಮಾಡಲಾಗುತ್ತಿದೆ. ಭಾಗಮಂಡಲದಿAದ ತಲಕಾವೇರಿವರೆಗೆ ಅಗತ್ಯವಿರುವೆಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಭಕ್ತಾದಿಗಳಿಗೆ ಮನೆ ಹಾಗೂ ಅಂಗಡಿಗಳಲ್ಲಿನ ಶೌಚಾಲಯಗಳನ್ನು ಬಳಸಲು ಅವಕಾಶ ನೀಡುವಂತೆ ರಸ್ತೆ
ಬದಿಯ ಅಂಗಡಿ ವ್ಯಾಪಾರಿಗಳಿಗೆ ಹಾಗೂ ಮನೆಯವರಿಗೆ ಪಂಚಾಯಿತಿಯಿAದ ನೋಟೀಸ್ ನೀಡಲಾಗಿದೆ. ಭಾಗಮಂಡಲ ಮಾರುಕಟ್ಟೆ ಬಳಿ ಪಂಚಾಯಿತಿಯ ಶೌಚಾಲಯವಿದ್ದು, ಇದನ್ನು ಕೂಡ ಭಕ್ತರು ಬಳಸಿಕೊಳ್ಳ ಬಹುದಾಗಿದೆ. ತಲಕಾವೇರಿಯಲ್ಲಿ ಪಂಚಾಯಿತಿಯ ೩ ಶೌಚಾಲಯ ವಿದ್ದು, ದೇವಾಲಯಕ್ಕೆ ಸೇರಿದ ಶೌಚಾಲಯ ವ್ಯವಸ್ಥೆಯೂ ಇರುತ್ತದೆ. ಭಾಗಮಂಡಲದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ತಲಕಾವೇರಿಯಲ್ಲೂ ಅಗತ್ಯ
ವ್ಯವಸ್ಥೆ ಮಾಡಲಾಗುತ್ತಿದೆ. ತಾ. ೧೬, ೧೭, ೧೮ರಂದು ಮೂರು ದಿನಗಳ
ಕಾಲ ಜಾತ್ರೆ ಹಿನ್ನೆಲೆಯಲ್ಲಿ ವಾಹನ ಪಾರ್ಕಿಂಗ್ ಶುಲ್ಕ ಸಂಗ್ರಹ ಇರುವುದಿಲ್ಲ. ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ತೆರೆಯಲು ಟೆಂಡರ್ ಕರೆದಿಲ್ಲ. ಯಾರಾದರೂ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಲ್ಲಿ
ತಾ. ೧೭ರಂದು ಭೇಟಿ ನೀಡಿ ಶುಲ್ಕ ಸಂಗ್ರಹಾತಿ ಮಾಡಲಾಗುತ್ತದೆ ಎಂದು ಭಾಗಮಂಡಲ
ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ತಿಳಿಸಿದ್ದಾರೆ.
ಬಸ್ ವ್ಯವಸ್ಥೆ
ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಭಾಗಮಂಡಲದಿAದ ತಲಕಾವೇರಿಗೆ ಹೆಚ್ಚುವರಿಯಾಗಿ ಸುಮಾರು ಹತ್ತು ಸರ್ಕಾರಿ ಬಸ್ ಗಳನ್ನು ಸಾರ್ವಜನಿಕ ಸೇವೆಗಾಗಿ ನಿಯೋಜಿಸ ಲಾಗುವುದು. ಉಳಿದಂತೆ (ಮೊದಲ ಪುಟದಿಂದ) ತಾಲೂಕು ಕೇಂದ್ರಗಳಿAದಲೂ ಭಾಗಮಂಡಲಕ್ಕೆ ಅಗತ್ಯತೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ಒದಗಿಸಲಾಗುವುದು ಎಂದು ಡಿಪೋ ವ್ಯವಸ್ಥಾಪಕಿ ಗೀತಾ ಮಾಹಿತಿ ನೀಡಿದ್ದಾರೆ. ಖಾಸಗಿ ಬಸ್ಗಳು ಮಡಿಕೇರಿಯಿಂದ ಭಾಗಮಂಡಲಕ್ಕೆ, ಭಾಗಮಂಡಲ ದಿಂದ ತಲಕಾವೇರಿಗೆ ಎಂದಿನAತೆ ಸಂಚರಿಸಲಿವೆ. ಒಂದು ವೇಳೆ ಜನ ಸಂದಣಿ ಹೆಚ್ಚಿದ್ದಲ್ಲಿ ಹೆಚ್ಚುವರಿ ಬಸ್ಗಳು ಸಂಚಾರ ಮಾಡಲಿವೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಅನ್ನದಾನ
ಕೊಡಗು ಏಕೀಕರಣ ರಂಗದ ವತಿಯಿಂದ ತಾ. ೧೭ರಿಂದ ನ. ೧೭ರವರೆಗೆ ಕಾವೇರಿ ಜಾತ್ರೆ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಅನ್ನದಾನ ನಡೆಯಲಿವೆ. ತಾ. ೧೭ರಂದು ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನವಿರಲಿದ್ದು, ಉಳಿದ ದಿನಗಳಲ್ಲಿ ಬೆಳಿಗ್ಗೆ ಉಪಹಾರ, ಕಾಫಿ, ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಬೆಳಗ್ಗಿನ ಉಪಹಾರಕ್ಕೆ ಉಪ್ಪಿಟ್ಟು, ಚೌಚೌಬಾತ್, ಇಡ್ಲಿ ಮತ್ತಿತರ ಪದಾರ್ಥಗಳು ಇರಲಿದ್ದು, ಮಧ್ಯಾಹ್ನ ಅನ್ನ ಸಾಂಬಾರ್, ಪಲ್ಯ, ಉಪ್ಪಿನ ಕಾಯಿ ನೀಡಲಾಗುತ್ತದೆ. ಸುಮಾರು ೧೫ ಲಕ್ಷ ರೂ. ವೆಚ್ಚದಲ್ಲಿ ಎರಡೂವರೆ ಲಕ್ಷದಷ್ಟು ಮಂದಿಗೆ ಅನ್ನಸಂತರ್ಪಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಪ್ರಮೋದ್ ಸೋಮಯ್ಯ ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್
ಕಾವೇರಿ ಜಾತ್ರೆಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ೫ ಡಿಎಆರ್, ೨ ಕೆಎಸ್ಆರ್ಪಿ ತುಕಡಿ, ಸುಮಾರು ೪೦೦ ಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಪವಿತ್ರ ಕೊಳದÀ ಸುತ್ತಮುತ್ತ ಸೇರಿದಂತೆ ಅಗತ್ಯವಿರುವೆಡೆ ಬ್ಯಾರಿಕೇಡ್ಗಳನ್ನು ಅಳವಡಿಸುವುದರೊಂದಿಗೆ ಸೂಕ್ಷö್ಮ ಪ್ರದೇಶಗಳಲ್ಲಿ ಸುಮಾರು ೨೫ ಕಡೆ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ. ತಾ. ೧೭ರಂದು ಸಂಜೆ ೪ ಗಂಟೆ ಬಳಿಕ ಸರ್ಕಾರಿ ಬಸ್ಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳಿಗೆ ಭಾಗಮಂಡಲದಿAದ ತಲಕಾವೇರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಕ್ರಮ
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ೪ ತಂಡಗಳನ್ನು ರಚಿಸಲಾಗಿದೆ. ಭಾಗಮಂಡಲ ಆಸ್ಪತ್ರೆ, ಭಗಂಡೇಶ್ವರ ದೇವಾಲಯ ಬಳಿ, ತಲಕಾವೇರಿ - ಭಾಗಮಂಡಲದ ನಡುವೆ ಮತ್ತು ತಲಕಾವೇರಿಯಲ್ಲಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಭಕ್ತರಿಗೆ ಆರೋಗ್ಯ ಸಂಬAಧಿತ ತೊಂದರೆಗಳು ಎದುರಾದಲ್ಲಿ ಈ ತಂಡಗಳು ಸ್ಪಂದನ ನೀಡಲಿವೆ. ೮ ವೈದ್ಯರು, ೪ ಆ್ಯಂಬ್ಯುಲೆನ್ಸ್ಗಳನ್ನು, ೮ ಸ್ಟಾಫ್ ನರ್ಸ್ಗಳನ್ನು ಒಳಗೊಂಡು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಭಾಗಮಂಡಲ- ತಲಕಾವೇರಿ ನಡುವೆ ಸುಮಾರು ೨೦ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ ತೀರ್ಮಾನ
ಕುಂಡಿಕೆೆ ವ್ಯಾಪ್ತಿಯಲ್ಲಿನ ವ್ಯವಸ್ಥೆ ಭಕ್ತಾದಿಗಳಿಗೆ ತೀರ್ಥ ವಿತರಣೆ ಸಂಬAಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ಜಿಲ್ಲಾಡಳಿತವೇ ತೀರ್ಮಾನಿಸಲಿದೆ. ಕಾವೇರಿ ಜಾತ್ರೆ ಸಂಬAಧ ಸಿದ್ಧತೆಗಳು ಬಹುತೇಕ ಅಂತಿಮ ಹಂತದಲ್ಲಿದ್ದು, ತಾ. ೧೬ರಂದು ಪವಿತ್ರ ಕುಂಡಿಕೆ ವ್ಯಾಪ್ತಿಯಲ್ಲಿ ಹೂವಿನ ಅಲಂಕಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಲಕಾವೇರಿ - ಭಾಗಮಂಡಲ ದೇವಾಲಯ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಾ. ೧೭ರ ಬೆಳಿಗ್ಗೆ ೬ ಗಂಟೆಯಿAದ ತಾ. ೧೮ರ ಮಧ್ಯರಾತ್ರಿ ೧೨ ಗಂಟೆವರೆಗೆ ತಲಕಾವೇರಿ, ಭಾಗಮಂಡಲ ಹಾಗೂ ಚೇರಂಬಾಣೆ ಸುತ್ತಮುತ್ತ ೫ ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಪ್ರಭಾರ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
-ಕುಯ್ಯಮುಡಿ ಸುನಿಲ್