ಪೊನ್ನಂಪೇಟೆ, ಅ. ೧೨: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಡಿಕೇರಿ, ವೀರಾಜಪೇಟೆ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ೧೫೩ನೇ ಗಾಂಧಿ ಜಯಂತಿಯ ಸಂಭ್ರಮಾ ಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಸಮಾವೇಶ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಭಾ ಭವನದಲ್ಲಿ ನಡೆಯಿತು.

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ತತ್ವರೂಪಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮದ್ಯವು ಆತ್ಮ ಮತ್ತು ದೇಹ ಎರಡನ್ನೂ ಸುಡುತ್ತದೆ. ಕುಡಿತದ ಚಟವಿರುವ ವ್ಯಕ್ತಿಯ ಮನ ಪರಿವರ್ತನೆ ಮಾಡಿ ಮನೆ ಮನೆಯಲ್ಲಿಯೂ ಮದ್ಯ ಸೇವನೆಯನ್ನು ನಿಷೇಧಿಸಿದಾಗ ಮಾತ್ರ ಗಾಂಧಿ ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.

ಜನಜಾಗೃತಿ ವೇದಿಕೆ ತಾಲೂಕು ಸದಸ್ಯ ಕೋಳೆರ ದಯಾ ಚಂಗಪ್ಪ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಅರುಣ್ ಬಾನಂಗಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಗಣೇಶ್, ಪ್ರಕಾಶ್, ಸುನಿತಾ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಗಿರೀಶ್ ಪ್ರಾರ್ಥಿಸಿದರು. ವೀರಾಜ ಪೇಟೆ, ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಬಿ. ದಿನೇಶ್ ಸ್ವಾಗತಿಸಿದರು. ತಾಲೂಕಿನ ಕೃಷಿ ಮೇಲ್ವಿಚಾರಕ ರಾಮ್‌ಕುಮಾರ್ ನಿರೂಪಿಸಿದರು. ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹ ಮೂರ್ತಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪೊನ್ನಂಪೇಟೆ ಗಾಂಧಿ ವೃತ್ತದಿಂದ ಶ್ರೀ ರಾಮಕೃಷ್ಣ ಶಾರದಾಶ್ರಮದವರೆಗೆ ಮದ್ಯಪಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು.