ಸಿದ್ದಾಪುರ, ಅ. ೧೩: ಬಹುತೇಕ ಹಾವುಗಳು ಮೊಟ್ಟೆ ಹಾಕುವ ಸಂದರ್ಭ ಯಾರಿಗೂ ಕಾಣಿಸದಂತೆ ಕಲ್ಲುಬಂಡೆ, ಪೊದೆಗಳಲ್ಲಿ ಅಡಗಿ ಮೊಟ್ಟೆಯನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಅಪರೂಪದ ನೀರೊಳ್ಳೆ ಎಂಬ ಹಾವೊಂದು ಮೊಟ್ಟೆಗಳನ್ನಿಡುವ ದೃಶ್ಯವನ್ನು ಸಿದ್ದಾಪುರ ಗುಹ್ಯ ಗ್ರಾಮದ ಉರಗರಕ್ಷಕ ಸುರೇಶ್ ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಸಮೀಪದ ಫಿಶ್ ಫಾರ್ಮ್ ಬಳಿ ಹಾವು ಇರೋ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸಂದರ್ಭ ಕಲ್ಲು ಗುಂಡಿಯೊಳಗೆ ಮೊಟ್ಟೆ ಇಡಲು ಪ್ರಾರಂಭಿಸಿದ ಹಾವನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಕೆಲ ಗಂಟೆ ಕಾಲ ಸ್ಥಳದಲ್ಲೇ ಇದ್ದು ಗಮನಿಸಿದ ಸಂದರ್ಭ ೯ ಮೊಟ್ಟೆಗಳನ್ನು ಹಾಕಿದ ಹಾವು ಹಾಗೂ ಮೊಟ್ಟೆಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಹಾವನ್ನು ಕಾಡಿಗೆ ಬಿಟ್ಟು ಮೊಟ್ಟೆಗಳನ್ನು ಮನೆಯಲ್ಲಿ ಕಾವುಗಿಟ್ಟಿದ್ದಾರೆ. ನಲವತ್ತು ದಿನಗಳ ಒಳಗೆ ಮೊಟ್ಟೆಯಿಂದ ಹಾವು ಮರಿ ಹೊರ ಬರಲಿದ್ದು, ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಸುರೇಶ್ ತಿಳಿಸಿದ್ದಾರೆ.