(ಕೋವರ್ ಕೊಲ್ಲಿ ಇಂದ್ರೇಶ್)

ಬೆAಗಳೂರು, ಅ. ೧೨ : ರಾಜ್ಯದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರನ್ನು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಹೊರಗಿಡಲು ರಾಜ್ಯ ಸರ್ಕಾರವು ಚಿಂತಿಸಿದ್ದು, ಹಣಕಾಸಿನ ವ್ಯವಹಾರದ ಎಲ್ಲ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಪಿಡಿಓ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಲು ನಿರ್ಧರಿಸಲಾಗಿದೆ.

ದಿನಾಂಕ ೧೯.೮.೨೦೨೨ ರಂದು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿವರವಾಗಿ ಚರ್ಚಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣಗಳಿಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಅನುಪಾಲನಾ ವರದಿ ನೀಡುವಂತೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಕ್ಕೆ ೨೦೦೬ರಲ್ಲಿ ಮಾಡಲಾಗಿದ್ದ ತಿದ್ದುಪಡಿಯಂತೆ ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸುವ ಅಧಿಕಾರಿಗಳು ಅಥವಾ ಪ್ರಾಧಿಕಾರ ನಿರ್ವಹಿಸಬಹುದು. ಇಂತಹ ಅಧಿಕಾರವನ್ನು ಇಲ್ಲಿಯವರೆಗೂ ಸ್ಥಳೀಯ ಆಡಳಿತದ ಚುನಾಯಿತ ಮುಖ್ಯಸ್ಥರಾದ ಅಧ್ಯಕ್ಷರಿಗೂ ನೀಡಲಾಗಿತ್ತು. ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಠಾನ, ಹಣಕಾಸಿನ ನಿಧಿ, ಪಂಚಾಯಿತಿ ತೆರಿಗೆ, ಖರ್ಚು– ವೆಚ್ಚಗಳ ಎಲ್ಲ ಚೆಕ್ಗಳಿಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯವಾಗಿತ್ತು. ಈಗ ಸರ್ಕಾರ ೨೦೦೬ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಅಧ್ಯಕ್ಷರ ಸಹಿ ಅಧಿಕಾರ ಹಿಂಪಡೆಯಲು ಹೊಸದಾಗಿ ನಡಾವಳಿ ರೂಪಿಸಲಾಗಿದೆ.

ಸಭೆಯಲ್ಲಿ ಹಾಜರಿದ್ದ ಉನ್ನತ ಅಧಿಕಾರಿಗಳ ಪ್ರಕಾರ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಲಂಚ ಪಡೆಯುವಾಗ

(ಮೊದಲ ಪುಟದಿಂದ) ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದಲ್ಲದೆ ಅನೇಕ ಪ್ರಕರಣಗಳಲ್ಲಿ ವಿಳಂಬವಾಗಿ ಬಿಲ್ ಪಾವತಿ ಮಾಡುತ್ತಿರುವುದನ್ನೂ ಚರ್ಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿದ್ದು, ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಸರ್ಕಾರಿ ನೌಕರರಾದ ಅಭಿವೃದ್ಧಿ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕರು ಚೆಕ್‌ಗಳಿಗೆ ಸಹಿ ಮಾಡುವಂತೆ ಸೂಚಿಸಲಾಗಿದೆ. ಇದುವರೆಗೂ ಗ್ರಾಮ ಪಂಚಾಯಿತಿ ನಿರ್ಣಯ ತೆಗೆದುಕೊಂಡ ನಂತರ, ಪಂಚಾಯಿತಿ ನಿರ್ಣಯ ಸಂಖ್ಯೆ, ದಿನಾಂಕ ನಮೂದಿಸಿ ಇ–ಸ್ವತ್ತು ತಂತ್ರಾAಶದ ಮೂಲಕ ತೆರಿಗೆ ನಿರ್ಧಾರ ಪಟ್ಟಿಗಳನ್ನು ವಿತರಿಸಲಾಗುತ್ತಿತ್ತು. ಆದರೆ ಗ್ರಾಮ ಪಂಚಾಯಿತಿ ಸಭೆಗಳು ನಿಗದಿತವಾಗಿ ನಡೆಯದ ಕಾರಣ, ನಮೂನೆ ವಿತರಿಸುವ ಸಂಪೂರ್ಣ ಅಧಿಕಾರವನ್ನು ಪಿಡಿಓಗಳಿಗೆ ನೀಡಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೃಹ, ವಾಣಿಜ್ಯ ಕಟ್ಟಡ ಕಾಮಗಾರಿಗಳು, ಕೈಗಾರಿಕೆ, ಗಣಿಗಾರಿಕೆ, ಅಂಗಡಿ, ಹೊಟೇಲ್ ಮತ್ತಿತರ ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಗಿ, ಇ–ಸ್ವತ್ತು (ನಮೂನೆ–೯, ೧೧ಎ, ೧೧ಬಿ) ನೀಡುವ ಕುರಿತು ಈಗ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಪಂಚಾಯತ್ ರಾಜ್ ಕಾಯ್ದೆಯ ೬೪ ರಿಂದ ೭೦ರವರೆಗಿನ ನಿಯಮಗಳಿಗೆ ತಿದ್ದುಪಡಿ ತಂದು ಪರವಾನಗಿ ನೀಡುವ ಅಧಿಕಾರವನ್ನು ಪಿಡಿಓಗಳಿಗೆ ವಹಿಸಲಾಗಿದ್ದು, ನೀಡಿದ ನಂತರ ಸಭೆಯ ಗಮನಕ್ಕೆ ತರಲೂ ಸೂಚಿಸಲಾಗಿದೆ. ಈ ತಿದ್ದುಪಡಿ ಜಾರಿ ಆದಲ್ಲಿ ವಿವಿಧ ಉದ್ಯಮ, ವ್ಯಾಪಾರ ಆರಂಭಿಸಲು ನಿರಾಕ್ಷೇಪಣಾ ಪತ್ರವನ್ನು ಪಿಡಿಓ ಅವರೇ ನೀಡಬಹುದಾಗಿದೆ. ಗ್ರಾಮ ಪಂಚಾಯಿತಿ ಸಭೆಗಳು ಸಕಾಲದಲ್ಲಿ ನಡೆಯದ ಕಾರಣ ವಿಳಂಬ ತಪ್ಪಿಸಲು ಇಂತಹ ಕ್ರಮ ಅನಿವಾರ್ಯ ಎಂದು ವಿವರಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನ ಅವರು ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿರುವ ಕುರಿತು ರಾಜ್ಯ ಸರ್ಕಾರದಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ ಎಂದರು.