ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಮಸ್ಜಿದುನ್ನೂರ್‌ನಲ್ಲಿ ಪ್ರವಾದಿ ಮಹಮ್ಮದ್ ಅವರ ಜನ್ಮ ದಿನದ ಪ್ರಯುಕ್ತ ೨ ದಿನಗಳ ಈದ್ ಮಿಲಾದ್ ಆಚರಣೆ ನಡೆಯಿತು. ಮಿಲಾದ್ ಸಂದೇಶ ಜಾಥಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮದರಸ ವಿದ್ಯಾರ್ಥಿಗಳು ಹಾಗೂ ಯೂತ್ ಸಮಿತಿ ಸದಸ್ಯರು ರಾಷ್ಟçಧ್ವಜ, ನಾಡಧ್ವಜ ಹಾಗೂ ಈದ್ ಮಿಲಾದ್ ಧ್ವಜ ಹಿಡಿದು ಮಿಲಾದ್ ಸಂದೇಶ ಜಾಥಾ ನಡೆಸಿದರು. ಹ್ಯಾಂಡ್ ಪೋಸ್ಟ್, ಬ್ಯಾಡಗೊಟ್ಟ, ಕಲ್ಲಾರೆ ಗ್ರಾಮಗಳ ಮದರಸ ವಿದ್ಯಾರ್ಥಿಗಳ ೩ ತಂಡ ಹಾಗೂ ಯೂತ್ ಸಮಿತಿ ಸದಸ್ಯರ ೨ ತಂಡಗಳ ದಫ್ ಪ್ರದರ್ಶನ ನಡೆಯಿತು.
ಮೆರವಣಿಗೆ ಬ್ಯಾಡಗೊಟ್ಟ ಮದರಸದಿಂದ ಆರಂಭವಾಗಿ ಹ್ಯಾಂಡ್ ಪೋಸ್ಟ್ ಜಂಕ್ಷನ್‌ಗಾಗಿ ದೊಡ್ಡಕುಂದದವರೆಗೆ ಸಾಗಿ ಮಸ್ಜಿದುನ್ನೂರ್‌ನಲ್ಲಿ ಸಮಾಪ್ತಿಯಾಯಿತು. ಮೆರವಣಿಗೆ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಪಾವನಾ ಗಗನ್, ಮಧು, ಜಯಂತ್, ವಸೀಂ ಗೆಳೆಯರ ಬಳಗ ತಂಪು ಪಾನೀಯ ಮತ್ತು ಸಿಹಿ ವಿತರಿಸಿತು.
ಸಮಾರೋಪ ಕಾರ್ಯಕ್ರಮ ಮಸ್ಜಿದುನ್ನೂರ್ ಅಧ್ಯಕ್ಷ ಡಿ.ಎ. ಸುಲೈಮಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಹಾಫಿಳ್ ಸಯ್ಯದ್ ಅಬ್ದುಲ್ ಖದೀರ್ ಪಟ್ಟಾಂಬಿ ಆಶೀರ್ವಚನ ನೀಡಿದರು. ಧರ್ಮಗುರು ಹಾರಿಸ್ ಬಖಾವಿ ಕಂಡಕೆರೆ ಧಾರ್ಮಿಕ ಪ್ರವಚನ ನೀಡಿದರು. ಪ್ರಧಾನ ಕಾರ್ಯದರ್ಶಿ ಎಂ.ಎA. ಹನೀಫ್, ಮದರಸ ಅಧ್ಯಕ್ಷ ರಜಾಕ್ ಫೈಝಿ ಹಾಗೂ ಝಹಿರ್ ನಿಜಾಮಿ ಮಾತನಾಡಿದರು.
ಅಧ್ಯಾಪಕರಾದ ಮುಸ್ತಫ ಮುಸ್ಲಿಯಾರ್, ಸಮೀದ್ ಸಖಾಫಿ, ಅಝೀಝ್, ಸ್ವಾಲೀಹ್ ರಹ್ಮಾನಿ, ಪ್ರಮುಖರಾದ ಇಬ್ರಾಹಿಂ ಮಲ್ಲಳ್ಳಿ, ಬಿ.ಎಸ್. ಬಾಸಿತ್, ಸುಲೈಮಾನ್, ಸಾಬ್ಜಾನ್, ರಫೀಕ್, ರಹೀಂ, ಬಾಸಿತ್ ಹಾಜಿ, ಮುನೀರ್, ಖಾದರ್, ಝಕರಿಯಾ, ಮಹಮ್ಮದ್, ಮಹಮ್ಮದಾಲಿ, ಕೆ.ಕೆ. ಸುಲೈಮಾನ್, ಹಂಝ ಇತರರು ಉಪಸ್ಥಿತರಿದ್ದರು.
ಮಸೀದಿ, ಮದರಸಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೂರ್ ಮಹಲ್‌ನಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಚೆಯ್ಯಂಡಾಣೆ: ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಹಾಗೂ ನಜ್ಮುಲ್ ಹುದಾ ಮದರಸದ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ, ಹಾಡು, ಭಾಷಣ ಇನ್ನಿತರ ಕಾರ್ಯಕ್ರಮ ಜರುಗಿತು. ಎಡಪಾಲ ಮಸೀದಿಯಿಂದ ಅಂಡತ್ ಮಾನಿ ದರ್ಗಾದವರೆಗೆ ಪ್ರವಾದಿಯವರ ಶಾಂತಿಯ ಸಂದೇಶದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೊಹಲ್ಲಾದ ಖತೀಬ್ ನಿಝರ್ ಫೈಝಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಮುಖ್ಯೋಪಾಧ್ಯಾಯ ಹಮೀದ್ ದಾರಿಮಿ ವಹಿಸಿದ್ದರು.
ಈ ಸಂದರ್ಭ ಕೊಡಗು ಜಿಲ್ಲಾ ನಾಹಿಬ್ ಖಾಝಿ ಅಬ್ದುಲ್ಲ ಫೈಝಿ, ಪೊಯಾಪಳ್ಳಿ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ, ಕಾರ್ಯದರ್ಶಿ ಕೆ.ಎಂ. ಹಮೀದ್, ಕೋಶಾಧಿಕಾರಿ ಹನೀಫಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಮೊಹಲ್ಲಾದ ಮದರಸದಲ್ಲಿ ಸೇವೆಗೈಯುತ್ತಿರುವ ಅಧ್ಯಾಪಕರುಗಳನ್ನು ಸನ್ಮಾನಿಸಲಾಯಿತು.