ಮಡಿಕೇರಿ, ಅ. ೧೧: ಭಾರತದ ೭೫ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ‘ಅಜ್ಹಾದಿ ಕಾ ಅಮೃತ ಮಹೋತ್ಸವ’ದ ಪ್ರಯುಕ್ತ ಭಾರತ ಸರ್ಕಾರವು ೧೮ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ ಮುಂಜಾಗ್ರತಾ ಕೋವಿಡ್ ಲಸಿಕೆಯನ್ನು ನೀಡುತ್ತಿದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿಯೂ ಕೂಡ ಎಲ್ಲಾ ಆರೋಗ್ಯ ಕೇಂದ್ರಗಳ ಲಸಿಕಾ ವಿಭಾಗದಲ್ಲಿ ಮುಂಜಾಗ್ರತಾ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಎರಡನೇ ವರಸೆಯ ಕೋವಿಡ್ ಲಸಿಕೆಯನ್ನು ಪಡೆದು ೬ ತಿಂಗಳು ಪೂರೈಸಿರುವ ೧೮ ವರ್ಷ ಮೇಲ್ಪಟ್ಟ ಒಟ್ಟು ೩,೦೯,೧೪೩ ಫಲಾನುಭವಿಗಳು ಮುಂಜಾಗ್ರತಾ ಕೋವಿಡ್ ಲಸಿಕಾಕರಣಕ್ಕೆ ಬಾಕಿ ಇದ್ದು, ಈ ಎಲ್ಲಾ ಅರ್ಹ ಫಲಾನುಭವಿಗಳು ತಮ್ಮ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪ್ರತಿ ದಿನ ನಡೆಯುವ ಲಸಿಕಾ ಶಿಬಿರ ಹಾಗೂ ಪ್ರತಿ ಬುಧವಾರ ನಡೆಯುವ ಲಸಿಕಾ ಮೇಳದಲ್ಲಿ ಕೋವಿಡ್ ಲಸಿಕೆಯನ್ನು ಹಾಕಿಸಿ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಳು ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ.