ಮಡಿಕೇರಿ, ಅ. ೧೦: ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮ ಗಂಟು ರೋಗ ಪಶುಪಾಲಕರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಈ ರೋಗ ವ್ಯಾಪಕವಾಗುತ್ತಿದ್ದು, ನಿರ್ದಿಷ್ಟ ಔಷಧಿ ಲಭ್ಯವಿಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ ಎನ್ನುವುದು ಸದ್ಯಕ್ಕೆ ನೆಮ್ಮದಿ ಕೊಡುವ ವಿಷಯ.
ಲಂಪಿ ರೋಗ ಎಂದು ಕೂಡ ಕರೆಯಲ್ಪಡುವ ಚರ್ಮ ಗಂಟು ರೋಗ ವೈರಾಣುಗಳಿಂದ ಬರುತ್ತದೆ. ಆಫ್ರಿಕಾದ ದೇಶಗಳಲ್ಲಿ ಈ ರೋಗ ಸಾಮಾನ್ಯ. ೨೦೧೮ರಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿತು. ೨೦೨೦ರಲ್ಲಿ ಕರ್ನಾಟಕಕ್ಕೂ ಕಾಲಿಟ್ಟಿತು. ಎಮ್ಮೆಗಳಿಗೆ ಅಷ್ಟೇನೂ ತೊಂದರೆ ಮಾಡದ ಈ ರೋಗ ದನಗಳನ್ನು ಸುಮಾರು ೧ ತಿಂಗಳ ಕಾಲ ನರಳುವಂತೆ ಮಾಡುತ್ತದೆ. ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ ಸಾವು ಖಚಿತ.
ಚರ್ಮ ಗಂಟು ರೋಗಕ್ಕೆ ಕ್ಯಾಪ್ರಿಪಾಕ್ಸ್ ಎಂಬ ಪ್ರಬೇಧದ ವೈರಾಣು ಕಾರಣ. ಇದು ಸೊಳ್ಳೆ, ಜಾನುವಾರುಗಳ ಮೈಮೇಲಿನ ಉಣ್ಣಿಗಳ ಮೂಲಕ ವೇಗವಾಗಿ ಹರಡುತ್ತದೆ. ಎಲ್ಲಾ ವಯೋಮಾನದ ಜಾನುವಾರುಗಳಿಗೂ ರೋಗ ಅಂಟುತ್ತದೆ. ಆದರೆ ಮಿಶ್ರತಳಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ತಳಿ, ಹಾಲು ಕೊಡುತ್ತಿರುವ ಹಸುಗಳು, ಕೃಶಕಾಯ ರಾಸುಗಳಿಗೆ ಬೇಗ ಹರಡುತ್ತದೆ.
ವೈರಾಣು ರಾಸುಗಳ ದೇಹಕ್ಕೆ ಸೇರಿದ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ೧-೨ ವಾರಗಳು ಬೇಕಾಗಬಹುದು. ಸಾಮಾನ್ಯವಾಗಿ ಚಿಕ್ಕ ಚಿಕ್ಕ ಗಂಟುಗಳು ತಾವಾಗಿಯೇ ಗುಣವಾಗುತ್ತದೆ. ದೊಡ್ಡ ಗಂಟುಗಳು ಗಾಯಗಳಾಗಿ ನೀರು ಸುರಿಯಲು ಆರಂಭವಾಗಬಹುದು. ಇದು ನೊಣಗಳನ್ನು ಆಕರ್ಷಿಸುವುದರಿಂದ ಅವು ಅಲ್ಲಿ ಮೊಟ್ಟೆ ಇಟ್ಟು, ಹುಳು ಆಗಿ ಗಾಯ ಮತ್ತಷ್ಟು ಜೋರಾಗಬಹುದು. ರೋಗ ನಿರೋಧಕ ಲಸಿಕೆಯನ್ನು ಮುಂಚಿತವಾಗಿಯೇ ಹಾಕಿಸಿಕೊಂಡಿದ್ದರೆ ಅಷ್ಟೊಂದು ಸಮಸ್ಯೆ ಆಗುವುದಿಲ್ಲ. ರೋಗ ಬಂದ ನಂತರ ಲಸಿಕೆ ಪಡೆದರೆ ಯಾವುದೇ ಪ್ರಯೋಜನ ಇಲ್ಲ. ಎಲ್ಲಾ ವಯಸ್ಸಿನ ರಾಸುಗಳಿಗೂ ವರ್ಷಕ್ಕೆ ಒಮ್ಮೆ ಲಸಿಕೆ ಹಾಕಿಸಿಕೊಳ್ಳಬೇಕು. ಹೊಸದಾಗಿ ತಂದಿರುವ ರಾಸುಗಳಿಗೂ ಲಸಿಕೆ ಹಾಕಿಸಿಕೊಳ್ಳಬೇಕು.
ಚರ್ಮ ಗಂಟುರೋಗ ಪೀಡಿತ ಹಸುವಿನ ಹಾಲು ಕುಡಿಯಬಹುದು. ಹಾಲಿನ ಗುಣಮಟ್ಟಕ್ಕೂ ಚರ್ಮ ರೋಗಕ್ಕೂ ಸಂಬAಧ ಇಲ್ಲ ಎನ್ನುತ್ತಾರೆ ವೈದ್ಯರು. ಮತ್ತೊಂದು ಕಡೆ ಪಶುಪಾಲಕರನ್ನು ಕಂಗೆಡಿಸಿರುವ ಚರ್ಮ ಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟರೆ ೨೦ ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ರೋಗದ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಕೂಡ ಪ್ರಕಟಿಸಿರುವ ಅವರು, ಗಂಟು ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದಿದ್ದಾರೆ. -ಸುನಿಲ್ ಪೊನ್ನೇಟಿ