ಮುಲಾಯಂ ಸಿಂಗ್ ಯಾದವ್ ವಿಧಿವಶ

ಲಖ್ನೊ, ಅ. ೧೦: ಉತ್ತರ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ (೮೨) ಅವರು ತಾ. ೧೦ ರಂದು ವಿಧಿವಶರಾದರು. ಮೂರು ಬಾರಿ ಮುಖ್ಯಮಂತ್ರಿಯಾಗಿ ಮತ್ತು ಭಾರತದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ೧೦ ಬಾರಿ ವಿಧಾನಸಭಾ ಸದಸ್ಯರಾಗಿ ಹಾಗೂ ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇಂದು ಬೆಳಿಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಬಹು ಅಂಗಾAಗ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ನವೆಂಬರ್ ೨೨, ೧೯೩೯ ರಂದು, ಮಧ್ಯ ಉತ್ತರ ಪ್ರದೇಶದ ಇಟ್ವಾ ಜಿಲ್ಲೆಯ ಸೈಫಾಯಿ ಗ್ರಾಮದಲ್ಲಿ ಜನಿಸಿದ ಮುಲಾಯಂ ಸಿಂಗ್ ಯಾದವ್ ಶಿಕ್ಷಕರಾಗಿ ವೃತ್ತಿ ಆರಂಭಿಸಿ ೧೯೬೭ ರಲ್ಲಿ ಜಸ್ವಂತನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಗೆಲ್ಲುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಯುಪಿಯಾದ್ಯಂತ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿ ೧೦ ಬಾರಿ ಶಾಸಕ ಮತ್ತು ಏಳು ಬಾರಿ ಸಂಸದರಾಗುವ ಮೂಲಕ ಮುಲಾಯಂ ಅವರು ೧೯೯೨ ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು ೧೯೮೯ ರಲ್ಲಿ ಮೊದಲ ಬಾರಿಗೆ ಯುಪಿ ಸಿಎಂ ಆಗಿ ಗದ್ದುಗೆ ಏರಿದರು. ಪ್ರಸ್ತುತ ಮೈನ್‌ಪುರಿ ಸಂಸದರಾಗಿ ಪ್ರತಿನಿಧಿಸುತ್ತಿದ್ದರು.

ಉಕ್ರೇನ್‌ನ ಮೇಲೆ ರಷ್ಯಾ ದಾಳಿ

ಕೀವ್, ಅ. ೧೦: ರಷ್ಯಾ ಉಕ್ರೇನ್‌ನ ಹಲವು ನಗರಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ರಾಜಧಾನಿ ಕೀವ್ ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕೀವ್ ಮೇಲೆ ನಡೆಸಿರುವ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ನಂತರ ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್ ಮೇಲೆ ದಾಳಿ ನಡೆಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದ ಮೇಲೆ ಉಕ್ರೇನ್ ತನ್ನ ಭಯೋತ್ಪಾದಕ ದಾಳಿಯನ್ನು ಮುಂದುವರೆಸಿದರೆ, ಮಾಸ್ಕೋದ ಪ್ರತಿಕ್ರಿಯೆಯು ಇನ್ನಷ್ಟು ಕಠಿಣವಾಗಿರುತ್ತದೆ ಎಂದು ಪುಟಿನ್ ಎಚ್ಚರಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೀವ್‌ನಲ್ಲಿ ಕನಿಷ್ಟ ಎಂಟು ಜನರು ಮೃತಪಟ್ಟಿದ್ದಾರೆ ಮತ್ತು ೨೪ ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯದ ಸಲಹೆಗಾರ ರೋಸ್ಟಿಸ್ಲಾವ್ ಸ್ಮಿರ್ನೋವ್ ಹೇಳಿದ್ದಾರೆ.

ವಿದ್ಯಾರ್ಥಿನಿ ಮೇಲೆ ಹರಿದ ಬಸ್

ಬೆಂಗಳೂರು, ಅ. ೧೦: ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನಡೆದಿದ್ದು, ಇದೇ ವಿಚಾರವಾಗಿ ಜ್ಞಾನಭಾರತಿ ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬಸ್ ಹತ್ತುವಾಗ ಕೆಳಗೆ ಬಿದ್ದ ಯುವತಿಯನ್ನು ಗಮನಿಸದೇ ಚಾಲಕ ಬಸ್ ಮುಂದಕ್ಕೆ ಚಲಾಯಿಸಿ ಅಜಾಗರೂಕತೆ ತೋರಿದ್ದಾನೆ. ಈ ಹಿನ್ನೆಲೆ ಯುವತಿ ಸೊಂಟದ ಮೇಲೆ ಬಸ್ ಹರಿದಿದ್ದು, ವಿದ್ಯಾರ್ಥಿನಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಕೋಲಾರ ಮೂಲದ ಶಿಲ್ಪ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಶಿಲ್ಪಾಳನ್ನು ಸ್ಥಳೀಯ ಪೊಲೀಸರು ಹತ್ತಿರದ ಅಸ್ಪತ್ರೆಗೆ ರವಾನಿಸಿದ್ದಾರೆ. ಇವರು ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಎಸಿಬಿ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ನಿರಾಕರಣೆ

ನವದೆಹಲಿ, ಅ. ೧೦: ಭ್ರಷ್ಟಚಾರ ನಿಗ್ರಹದಳ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪುನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸರ್ವೋಚ್ಛ ನ್ಯಾಯಾಲಯ ಸೋಮವಾರ ನಿರಾಕರಿಸಿದೆ. ಈ ಹಿಂದೆ ಈ ಅರ್ಜಿಯ ವಿಚಾರಣೆ ಪಟ್ಟಿಗೆ ಸೇರಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿತ್ತು. ಆದರೆ ಇಂದು ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ. ೨೦೧೬ರಲ್ಲಿ ಸ್ಥಾಪಿಸಲಾದ ಭ್ರಷ್ಟಚಾರ ನಿಗ್ರಹದಳ(ಎಸಿಬಿ)ವನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಕನಕರಾಜು ಎಂಬುವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದು ಈ ಅರ್ಜಿಯನ್ನು ವಿಚಾರಣೆಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಿತ್ತು. ಅರ್ಜಿದಾರ ಕನಕರಾಜು ಪರವಾಗಿ ವಕೀಲ ಅಶೋಕ್ ಪಾಣಿಗ್ರಾಹಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ದೇಶದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ಗ್ರಾಮ

ಅಹಮದಾಬಾದ್, ಅ. ೧೦: ಗುಜರಾತ್ ರಾಜ್ಯದ ಮೊಧೇರಾ ದೇಶದ ಮೊದಲ ೨೪*೭ ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇದ್ರ ಮೋದಿ ಘೋಷಿಸಿದ್ದಾರೆ. ಮೊಧೇರಾದಲ್ಲಿ ಪ್ರಸಿದ್ಧ ಸೂರ್ಯ ದೇವಾಲಯವಿದೆ. ಜಗತ್ತಿನಲ್ಲಿ ಸೌರಶಕ್ತಿಯ ಬಗ್ಗೆ ಜನರು ಚರ್ಚಿಸಿದಾಗಲೆಲ್ಲಾ ಈ ಗ್ರಾಮವು ಅದರಲ್ಲಿ ಕಾಣಿಸಿಕೊಳ್ಳುತ್ತದೆ. ಸರ್ಕಾರವು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಜನರು ಅದನ್ನು ಖರೀದಿಸುತ್ತಾರೆ. ಆದರೆ ಜನರು ಶಕ್ತಿಯ ಉತ್ಪಾದಕರಾಗಬೇಕೆಂದು ನಾವು ಬಯಸುತ್ತೇವೆ ಎಂದು ಪ್ರಧಾನಿ ಹೇಳಿದರು. ಮೊಧೇರಾದ ಜನರು ವಿದ್ಯುತ್ ಗ್ರಾಹಕರು ಮತ್ತು ಉತ್ಪಾದಕರು. ಸರ್ಕಾರ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಖರೀದಿಸುತ್ತಿದೆ. ಇಂತಹ ಯಶಸ್ವಿ ಪ್ರಯತ್ನಗಳು ದೇಶದಾದ್ಯಂತ ಪುನರಾವರ್ತನೆಯಾಗಬೇಕು ಎಂದು ಅವರು ಹೇಳಿದರು. ಮೊಧೇರಾ ಸೂರ್ಯ ದೇವಾಲಯ ಮತ್ತು ಪಟ್ಟಣದ ಸೌರ ವಿದ್ಯುತೀಕರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಿಂದ ಆಗಿದೆ. ಸೂರ್ಯ ದೇವಾಲಯದಿಂದ ಸುಮಾರು ೬ ಕಿ.ಮೀ. ದೂರದಲ್ಲಿರುವ ಮೆಹ್ಸಾನಾದ ಸುಜ್ಜನಪುರದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯೊಂದಿಗೆ (ಬಿಇಎಸ್‌ಎಸ್) ಗ್ರಾಮವನ್ನು ಸಂಯೋಜಿಸಿದೆ ಎಂದರು.

ಕ್ಷೇತ್ರ ಪಾಲಕ ಮೊಸಳೆ ಇನ್ನಿಲ್ಲ

ಕಾಸರಗೋಡು, ಅ. ೧೦: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ. ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು. ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸವಾಗಿದ್ದ ಬಬಿಯಾ ‘ದೇವರ ಮೊಸಳೆ' ಎಂದೇ ಪ್ರಸಿದ್ಧಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.

ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಶಿವಸೇನೆ ಕೋರ್ಟ್ ಮೊರೆ

ನವದೆಹಲಿ, ಅ. ೧೦: ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸದಂತೆ ಹೇಳಿರುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸೋಮವಾರ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಠಾಕ್ರೆ ಸಲ್ಲಿಸಿರುವ ಅರ್ಜಿಯು ಅಕ್ಟೋಬರ್ ೮ ರಂದು ಚುನಾವಾಣಾ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿದೆ. ಇದು ನೈಸರ್ಗಿಕ ನ್ಯಾಯದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಕ್ಷಿದಾರರಿಗೆ ಯಾವುದೇ ವಿವರಣೆಯನ್ನು ನೀಡದೆ ಅಂಗೀಕರಿಸಲಾಗಿದೆ ಎಂದು ಪ್ರತಿಪಾದಿಸಿದೆ. ಅರ್ಜಿಯು ಭಾರತೀಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟçದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನ ಪ್ರತಿವಾದಿಗಳನ್ನಾಗಿಸಿದೆ. ಮುಂದಿನ ಸೂಚನೆ ಬರುವವರೆಗೂ ಶಿವಸೇನೆಯ ಯಾವುದೇ ಬಣಗಳು ಪಕ್ಷದ ‘ಬಿಲ್ಲು ಮತ್ತು ಬಾಣ’ ಚಿನ್ಹೆ ಹಾಗೂ ಶಿವಸೇನೆ ಎಂಬ ಹೆಸರನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ತಾ. ೮ ರಂದು ಘೋಷಿಸಿತ್ತು.